ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿಎಲ್.ಡಿ.ಇ ಆಸ್ಪತ್ರೆಯ ಕಂಪೌಂಡದಿಂದ ಮಲ್ಲಿಕಾರ್ಜುನ ಆಶ್ರಮದ (ಜ್ಞಾನಯೋಗಾಶ್ರಮ) ಹಿಂದಿನ ರಸ್ತೆಯ ಮೂಲಕ ಸಿದ್ಧಾರೂಢ ಮಠದವರೆಗೆ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ೨೦೨೩-೨೪ನೇ ಸಾಲಿನ ಸಿ.ಆರ್.ಎಫ್ ಯೋಜನೆಯಡಿ ರೂ.೬ ಕೋಟಿ ಅನುದಾನ ಮಂಜೂರಿಸಲಾಗಿದ್ದು, ಟೆಂಡರ್ ಕೂಡ ಆಹ್ವಾನಿಸಲಾಗಿದೆ. ಆದಷ್ಟು ಶೀಘ್ರವಾಗಿ ರಸ್ತೆ ಅಭಿವೃದ್ಧಿಗೊಳ್ಳಲಿದೆ ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ಧಾರೂಢ ಮಠದ ರಸ್ತೆ ಹಾಳಾಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿರುವುದು ಗಮನಕ್ಕೆ ಬಂದ ತಕ್ಷಣ ಖುದ್ದಾಗಿ ರಸ್ತೆಯನ್ನು ಪರಿಶೀಲಿಸಿ, ಆದಷ್ಟು ಶೀಘ್ರವಾಗಿ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದೆ. ಅದರಂತೆ, ಇದೀಗ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹಾಗೂ ನಗರದ ಅಂಧವನ್ನು ಹೆಚ್ಚಿಸಲು ಅನುದಾನ ಮಂಜೂರಿಸಲಾಗಿದೆ.
ಈಗಾಗಲೇ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗ, ಸುಭಾಸಚಂದ್ರ ಬೋಸ್ ಮಾರ್ಗ, ಅಟಲ್ ಬಿಹಾರಿ ವಾಜಪೇಯಿ ಮಾರ್ಗ, ಮಹಾರಾಣಾ ಪ್ರತಾಪ ಮಾರ್ಗ, ಜಿಲ್ಲಾ ಪಂಚಾಯಿತಿ ಕಚೇರಿ ಮಾರ್ಗ ಸೇರಿದಂತೆ ನಗರದ ಅನೇಕ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ ಮಾದರಿಯಲ್ಲೇ, ಬಿಎಲ್.ಡಿ.ಇ ಆಸ್ಪತ್ರೆ ಕಂಪೌಂಡದಿಂದ ಮಲ್ಲಿಕಾರ್ಜುನ ಆಶ್ರಮದ ಹಿಂದಿನ ರಸ್ತೆಯ ಮೂಲಕ ಸಿದ್ಧಾರೂಢ ಮಠದ ವರೆಗಿನ ಸುಮಾರು ೨ ಕಿ.ಮೀ ಉದ್ದದ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಡಕ್ಟ್, ಡ್ರೇನ್, ಪುಟಪಾತ್ ಮತ್ತು ಮಾದರಿ ಬೀದಿ ದೀಪಗಳನ್ನು ಅಳವಡಿಸಲಾಗುವುದು.
ಈ ರಸ್ತೆಯ ಬದಿಯಲ್ಲಿ ಬರುವ ಸಾರ್ವಜನಿಕರು ರಸ್ತೆ ಒತ್ತುವರಿ ಮಾಡಿಕೊಂಡಲ್ಲಿ ಸ್ವಯಂ ಪ್ರೇರಿತಾಗಿ ತೆರವುಗೊಳಿಸಿಕೊಂಡು ರಸ್ತೆ ಅಭಿವೃದ್ಧಿಗೆ ಸಹಕರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

