ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ – ಗದಗ ಮೊ:9945789377
ಉದಯರಶ್ಮಿ ದಿನಪತ್ರಿಕೆ
ಹುಟ್ಟುವಾಗ ಬೆತ್ತಲೆ ಸತ್ತಾಗ ಬೆತ್ತಲೆ, ಮೂರು ದಿನದ ಬಾಳು, ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನು ಒಯ್ಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತವೆ. ನಾವು ಕೂಡ 100% ಇದನ್ನು ನಿಜ ಎಂದೇ ನಂಬುತ್ತೇವೆ. ಆದರೆ ನಮಗೆ ಗೊತ್ತಿಲ್ಲ ನಾವು ಬರುವಾಗ ನಮ್ಮ ಜೊತೆಗೆ ಈ ಐದು ವಿಷಯಗಳನ್ನು ಹೊತ್ತು ತರುತ್ತೇವೆ“ಪಂಚೈತಾನಪೀ ಶ್ರುಜ್ಯಂತೆ
ಗರ್ಭಸ್ತೈವ ದೇಹಿನಃ
ಆಯುಕರ್ಮಾಚ ವಿತ್ತಂತೆ
ವಿದ್ಯಾ ನಿಧನ ನೇವಚ”
ಎಂದು ಹೇಳಲಾಗಿದೆ. ಮನುಷ್ಯ ಭ್ರೂಣಾವಸ್ಥೆಯಲ್ಲಿರುವಾಗಲೇ ಮೇಲಿನ ಐದು ವಿಷಯಗಳನ್ನು ಹೊತ್ತು ಈ ಭೂಮಿಗೆ ಬರುತ್ತಾನೆ. ಆ ಐದು ವಿಷಯಗಳು ಆಯುಷ್ಯ, ಕರ್ಮ ಅಥವಾ ಉದ್ಯೋಗ, ವಿತ್ತ ಅಂದರೆ ಹಣ, ವಿದ್ಯೆ ಮತ್ತು ಸಾವು.
ಆಯುಷ್ಯ
ಮನುಷ್ಯ ಹುಟ್ಟುವಾಗಲೇ ಆತನ ಆಯುಷ್ಯ ನಿರ್ಧಾರವಾಗಿರುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಇದು ಅಕ್ಷರಶಃ ನಿಜ. ಪ್ರತಿ ಹುಟ್ಟುಹಬ್ಬಕ್ಕೂ ನಾವು ಒಂದೊಂದು ನಿಮಿಷವೂ ಸಾವಿಗೆ ಹತ್ತಿರವಾಗುತ್ತವೆ ಎಂಬುದು ಸಾರ್ವಕಾಲಿಕ ಸತ್ಯ. ನಾವು ಭೂಮಿಯ ಮೇಲೆ ಬದುಕಿರುವುದು ಆ ದೈವದ ನಿಯಾಮಕದಂತೆ.
ಕರ್ಮ
ಅಂದರೆ ಕಾಯಕ, ಕೆಲಸ ಎಂದರ್ಥ. ನಾವು ಮಾಡುವ ಕೆಲಸ ಪೂರ್ವ ನಿರ್ಧರಿತವಾದದ್ದು. ಯಾವುದೇ ಕೆಲಸ ನನ್ನ ಕೈಗೆ ಹತ್ತುತ್ತಿಲ್ಲ ಎಂದು ಕೆಲವರು ಗೋಳಾಡುವುದನ್ನು ನೋಡುತ್ತೇವೆ. ಇನ್ನೂ ಕೆಲವೆಡೆ ಎಷ್ಟೇ ಕೆಲಸ ಮಾಡಿದರು ತೃಪ್ತಿ ನೀಡುವುದಿಲ್ಲ. ಹಿಂದೆ ವೃತ್ತಿಯಾಧಾರಿತ ಕೆಲಸ ಕಾರ್ಯಗಳು ಇದ್ದವು.
ಪೂರ್ವಜನ್ಮಂ ಕೃತಂ ಕರ್ಮ
ಅಂದರೆ ನಾವು ಮಾಡುವ ಕರ್ಮಗಳು ನಮ್ಮ ಪೂರ್ವಜನ್ಮದ ಪಾಪ ಪುಣ್ಯಗಳ ಮೇಲೆ ಅವಲಂಬಿಸಿರುತ್ತವೆ ಎಂದು ಇಲ್ಲಿ ಹೇಳಲಾಗಿದೆ.

ವಿತ್ತ ಅಥವಾ ಹಣ
ಕೆಲವರು ಎಷ್ಟೇ ದುಡಿದರು ಅವರ ಬಳಿ ಹಣ ಉಳಿಯುವುದಿಲ್ಲ ಇನ್ನು ಕೆಲವರು ಎಷ್ಟೇ ಖರ್ಚು ಮಾಡಿದರು ಹಣವನ್ನು ದಂಡಿಯಾಗಿ ಸಂಪಾದಿಸುತ್ತಾರೆ. ಕೆಲವರು ಶ್ರೀಮಂತರಾಗಿಯೂ, ಕೆಲವರು ಬಡವರಾಗಿ ಇನ್ನೂ ಕೆಲವರು ನಿರ್ಗತಿಕರಾಗಿಯೂ ಬದುಕುತ್ತಾರೆ. ಇದು ಕೂಡ ನಮ್ಮ ಬದುಕಿನಲ್ಲಿ ಪಡೆದುಕೊಂಡು ಬಂದ ಪೂರ್ವ ನಿರ್ಧರಿತ ಭಾಗ್ಯ. ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಮ್ಮೆ ಅನಿರೀಕ್ಷಿತ ಸೌಭಾಗ್ಯ ದೊರೆಯುತ್ತದೆ. ಇದಕ್ಕೇನು ಹೇಳುವಿರಿ ಎಂದು ಕೇಳಬಹುದು.ಆದರೆ ಅದು ಕೂಡ ಪೂರ್ವ ನಿರ್ಧರಿತವೇ ಎಂದರೆ ನಂಬಲಿಕ್ಕಿಲ್ಲ ನೀವು. ನಮ್ಮ ಸ್ವಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ಎಂದು ನಾವು ಅಂದುಕೊಂಡರೂ ಆ ಪ್ರಯತ್ನಕ್ಕೆ ಕೂಡ ಒತ್ತಾಸೆಯಾಗುವುದು ಪೂರ್ವ ನಿರ್ಧರಿತ ಕರ್ಮವೇ ಎಂದು ಮೇಲಿನ ಶ್ಲೋಕದಲ್ಲಿ ಹೇಳಲಾಗಿದೆ.
ವಿದ್ಯೆ
ವಿದ್ಯೆಯನ್ನು ಕೂಡ ನಾವು ನಮ್ಮ ಹುಟ್ಟಿನೊಂದಿಗೆ ಪಡೆದು ಬಂದಿರುತ್ತೇವೆ. ಅತ್ಯಂತ ವಿದ್ಯಾವಂತ ಕುಟುಂಬದಲ್ಲಿ ಬುದ್ಧಿಹೀನ ಮಗು ಮತ್ತು ವಿದ್ಯೆಯ ಗಂಧವೇ ಅರಿಯದ ಮನೆಯಲ್ಲಿ ಚಾಣಾಕ್ಷಮತಿ ಮಕ್ಕಳು ಹುಟ್ಟುವುದು ಕೂಡ ಪೂರ್ವಜನ್ಮದ ಕರ್ಮಫಲ. ಕೆಲ ಮಕ್ಕಳು ಏಕ ಪಠ್ಯ ಗ್ರಾಹಿಗಳಿದ್ದರೆ ಇನ್ನು ಕೆಲವರು ಅದೆಷ್ಟೇ ಹಗಲು ರಾತ್ರಿ ಒಂದು ಮಾಡಿ ಓದಿದರು ಓದಿದ್ದು ನೆನಪಿನಲ್ಲಿ ಉಳಿಯದಂತಹವರು. ಎಲ್ಲವೂ ಅವರವರು ಪಡೆದುಕೊಂಡು ಬಂದದ್ದು.
ಸಾವು
ನಾವು ಹೇಗೆ,ಯಾವಾಗ, ಏಕೆ ಮತ್ತು ಎಲ್ಲಿ ಸಾಯುತ್ತೇವೆ ಎಂಬುದು ಇಂದಿಗೂ ಯಾರಿಗೂ ಗೊತ್ತಿಲ್ಲದ ನಿಗೂಢ ಸತ್ಯ. ಅದಷ್ಟೇ ಹಣವಿದ್ದರೂ ಅದೆಷ್ಟೇ ಆರೋಗ್ಯವಾಗಿದ್ದರೂ ಅದೆಷ್ಟೇ ಅನಾರೋಗ್ಯವಿದ್ದರೂ ಕೂಡ ಕಾಲನ ಕರೆ ಬಂದಾಗ ನಾವೆಲ್ಲರೂ ಹೋಗಲೇಬೇಕು. ಭೂಮಿಯ ಋಣ ಮುಗಿದಿದ್ದರೆ ಮಾತ್ರ ನಮಗೆ ಇಹಲೋಕದಿಂದ ಬಿಡುಗಡೆ.
ಅದಕ್ಕೆ ಒಂದು ಲೋಕಾರೂಢಿಯ ಮಾತು ಪ್ರಚಲಿತದಲ್ಲಿದೆ. ಹಿಂದಿನ ಜನ್ಮದ ಪಾಪ ಮುಂದಿನ ಜನ್ಮಕ್ಕೆ ಬುತ್ತಿಯ ಗಂಟಾಗಿ ಬರುತ್ತದೆ ಎಂದು.
ಇದನ್ನೇ ಗರುಡ ಪುರಾಣದಲ್ಲಿ
“ನ ಭುಕ್ತಾಮ್ ಶ್ರೀಯತೇ ಕರ್ಮ
ಕಲ್ಪಕೋಟಿ ಶತೈರಪಿ” ಎಂದು ಹೇಳಿದ್ದಾರೆ. ಸಾವಿರಾರು ಕೋಟಿ ಧನರಾಶಿ ಇದ್ದರೇನು ಕರ್ಮಫಲ ತಪ್ಪದು ಎಂಬುದು ಇದರ ಅರ್ಥ.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು
‘ಬಾರದು ಬಪ್ಪದು…ಬಪ್ಪದು ತಪ್ಪದು’
ಅಂದರೆ ಜೀವನದಲ್ಲಿ ಬರುವ ಘಳಿಗೆಗಳನ್ನು ಯಾರು ತಪ್ಪಿಸಲಾಗದು ಮತ್ತು ಬಾರದೇ ಇರುವುದನ್ನು ಎಂದಿಗೂ ಕರೆಯಲಾಗದು.
ಇದನ್ನೇ ಮುಂದುವರೆದು ಮಂಕುತಿಮ್ಮನ ಕಗ್ಗದಲ್ಲಿ ಡಿ ವಿ ಗುಂಡಪ್ಪನವರು
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅವನೇಳ್ದಂತೆ ನಾವ ಪಯಣಿಗರು ಮದುವೆಗೋ ಮಸಣಕೊ ಹೋಗೆಂದ ಕಡೆ ಹೋಗು ಪದ ಕುಸಿಯೇ ನೆಲವಿಹುದು ಮಂಕುತಿಮ್ಮ
ವಿಧಾತನ ಆಣತಿಯಂತೆ ನಮ್ಮ ಬದುಕು ನಡೆಯುತ್ತದೆ… ವಿಧಿಯು ನಡೆಸುತ್ತಿರುವ ಬದುಕೆಂಬ ಜಟಕಾ ಬಂಡಿ ಏರಿರುವ ನಾವುಗಳು ಕಷ್ಟ ಸುಖ ನೋವು ನಲಿವು ದುಃಖ ಅವಮಾನಗಳನ್ನು ಬದುಕಿನಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಮದುವೆಗೆ ಹೋಗುತ್ತೇವೆಯೋ ಮಸಣಕ್ಕೆ ಹೋಗುತ್ತೇವೆಯೋ ಎಂದು ಸೂಚ್ಯವಾಗಿ ಹೇಳಿದ್ದಾರೆ.ದೇಹದ ಮತ್ತು ಭೂಮಿಯ ಋಣ ತೀರಿದಾಗ ಹೆಜ್ಜೆಗಳು ಕುಸಿದು ದೇಹ ನೆಲವ ತಾಗಿ ಜೀವ ಹಾರಿ ಹೋಗುತ್ತದೆ.
ಆದ್ದರಿಂದ ನಮ್ಮ ಮುಂದಿನ ಜೀವನ ಚೆನ್ನಾಗಿ ಇರಬೇಕಾದರೆ ನಾವು ಸ್ವಸ್ಥ ಆರೋಗ್ಯವಂತ ಮತ್ತು ಸಾತ್ವಿಕರಾಗಿ ಬದಲಾಗಲೇಬೇಕು. ನಮ್ಮ ಮಕ್ಕಳಿಗೆ ಮಾದರಿಯಾಗಿ ನಡೆದುಕೊಳ್ಳಲೇಬೇಕು…. ಆ ದೆಸೆಯಲ್ಲಿ ಜೊತೆಗೂಡಿ ಹೆಜ್ಜೆ ಹಾಕುವ ಪ್ರಯತ್ನ ಮತ್ತು ಸದಾಶಯ ಸದಾ ನಮ್ಮದಾಗಿರಲಿ.


