ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಂಗಭೂಮಿ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಮಾಧ್ಯಮರಂಗ ಫೌಂಡೇಶನ್ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಎಸಿಡಿಪಿಒ ಎಸ್.ಎನ್.ಕೋರವಾರ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನ ಸಭಾಭವನದಲ್ಲಿ ಮಾಧ್ಯಮರಂಗ ಪೌಂಡೇಶನ್ ವತಿಯಿಂದ ದಸರಾ ಹಬ್ಬದ ರಜೆಯ ಪ್ರಯುಕ್ತ ಸರ್ಕಾರಿ ಶಾಲೆಯ ಮಕ್ಕಳಿಗೆ ೧೫ ದಿನಗಳ ಕಾಲ ಹಮ್ಮಿಕೊಂಡ ರಂಗ ತರಬೇತಿ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ, ಅಲ್ಲಿ ಓದುವ ಮಕ್ಕಳು ಅಂದರೆ ಈ ಸಮಾಜ ನೋಡುವ ದೃಷ್ಟಿ ಬೇರೆಯಿದೆ. ಸಾಲ ಮಾಡಿಯಾದರೂ ಖಾಸಗಿ ಶಾಲೆಯಲ್ಲಿ ಓದಿಸುವ ಪೋಷಕರು ಇಂತಹ ಮಕ್ಕಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಾಧ್ಯಮರಂಗ ಫೌಂಡೇಶನ್ ರಂಗ ತರಬೇತಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಮಾತನಾಡಿ, ಮಕ್ಕಳಿಗೆ ಕೇವಲ ಓದು ಬರಿ ಎಂದು ಹೇಳುವುದು, ವೈದ್ಯ ಇಂಜಿನಿಯರ್ ಮಾಡುವುದಲ್ಲ. ಸಾಂಸ್ಕೃತಿಕ ಪ್ರಪಂಚದಲ್ಲಿ ಅವರನ್ನು ಬಿಡಬೇಕು. ಹೆಚ್ಚಿಗೆ ಓದದೆ ಸಿನಿಮಾ, ಕ್ರೀಡೆ, ಉದ್ಯಮದಲ್ಲಿ ಸಾಧನೆ ಮಾಡಿದವರಿದ್ದಾರೆ. ಹೀಗಾಗಿ ಮಾಧ್ಯಮರಂಗ ಫೌಂಡೇಶನ್ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸದಾ ನಮ್ಮ ಸಹಕಾರ ಇರುತ್ತೆ ಅಂತಾ ಹೇಳಿದರು.
ವಿದ್ಯಾರ್ಥಿಗಳಿಂದ ಜರುಗಿದ ಸಿನಿಮಾ, ಜಾನಪದ ನೃತ್ಯ, ನಾಟಕ(ಬುದ್ದ ಮತ್ತು ಕಿಸಾ ಗೌತಮಿ) ನೋಡುಗರ ಕಣ್ಮನ ಸೆಳೆಯಿತು.
ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿದರು.
ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಶೋಕ ಬಿರಾದಾರ ಸ್ವಾಗತಿಸಿದರು. ಶರಣಮ್ಮ ಬೂದಿಹಾಳ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಸಹಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯರಾದ ರಮೇಶ ಬೂದಿಹಾಳ, ರೇಣುಕ ನವೀನ ಹಿಪ್ಪರಗಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಭರತೇಶ ಹಿರೋಳ್ಳಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರಾಜಶೇಖರ ಶೆಟ್ಟಿ, ಲಕ್ಕಣ್ಣ ಬೀರಗೊಂಡ, ಸಂಜೀವಕುಮಾರ ಡಾಂಗಿ, ಸಿದ್ದು ಬ್ಯಾಕೋಡ, ರಾಚು ಕೊಪ್ಪ, ಸುದರ್ಶನ ಜಂಗಣ್ಣಿ ಇಸ್ಮಾಯಿಲ್ ಶೇಖ್, ಭೋಜರಾಜ ದೇಸಾಯಿ, ಅಸ್ಫಾಕ್ ಕರ್ಜಗಿ, ಶಾಂತವೀರ ಹಿರೇಮಠ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

