ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರದ ವಿವಿಧ ಜನಪರ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೊತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು-ಜಾಗೃತಿ ಮೂಡಿಸುವ ಬೀದಿ ನಾಟಕ ಹಾಗೂ ಜಾನಪದ ಕಲಾ ತಂಡಗಳ ಪ್ರಸ್ತುತಿಯನ್ನು ವೀಕ್ಷಿಸಿ ಪರಿಶೀಲಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯನ್ನೊಳಗೊಂಡ ಸಮಿತಿ ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಲ್ಲಿ ಕಲಾ ತಂಡಗಳ ಪ್ರದರ್ಶನವನ್ನು ವೀಕ್ಷಿಸಿ ಸಮಿತಿಯು ಕಲಾ ತಂಡಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಟಕ್ಕಳಕಿ ಗ್ರಾಮದ ವಿಶ್ವಚೇತನ ಕಲಾ ಸಂಸ್ಥೆ ಬೀದಿನಾಟಕ ತಂಡ ಹಾಗೂ ಸಿದ್ದಾಪೂರದ ಶ್ರೀ ಗುರುಪ್ರಸಾದ ಜಾನಪದ ಕಲಾ ತಂಡ ಜಿಲ್ಲೆಯ ವಿವಿಧ ಆಯ್ದೆ ಗ್ರಾಮಗಳಲ್ಲಿ ಸಂಚರಿಸಿ ಕಲಾ ಪ್ರದರ್ಶನಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಜಾಗೃತಿ ಮೂಡಿಸಲಿದೆ.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಶ್ರೀಮತಿ ಸಾವಿತ್ರಿ ಗುಗ್ಗರಿ, ಆರೋಗ್ಯ ಇಲಾಖೆಯ ಹೊಸಮನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿನಿಚಾಲಕ ಸುರೇಶ ಅಂಬಿಗೇರಿ ಉಪಸ್ಥಿತರಿದ್ದರು.

