ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರು ಮರುನಾಮಕರಣ ಹಾಗೂ ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಣಗೊಳಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಇಂದಿಗೆ ೩ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ಡಾ,ಗುರುಶಾಂತವೀರ ಶಿವಾಚಾರ್ಯರು ಮಾತನಾಡಿ, ಈ ಮೂರು ಬೇಡಿಕೆಗಳು ಬಹಳಷ್ಟು ಹಳೆಯದಾಗಿದ್ದು, ಈ ಬಗ್ಗೆ ಜಿಲ್ಲಾಡಳಿತದ ಕಣ್ತೆರೆಯುವ ಕೆಲಸಕ್ಕೆ ನಮ್ಮಿಂದ ಸಂಪೂರ್ಣ ಬೆಂಬಲ ವಿದೆ. ಇವು ಬಹು ಮುಖ್ಯ ಬೇಡಿಕೆಗಳಾಗಿದ್ದು, ಇವುಗಳನ್ನು ಈಡೇರಿಸುವವರೆಗೆ ಈ ಧರಣಿ ಸತ್ಯಾಗ್ರಹ ಕೊನೆಗೊಳ್ಳುವುದಿಲ್ಲ ಎನ್ನುವದನ್ನು ಜಿಲ್ಲಾಡಳಿತ ಹಾಗೂ ಸರಕಾರ ಅರಿತುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಗೌಡ ದಾಶ್ಯಾಳ ಮಾತನಾಡಿ, ನಾವು ಚಿಕ್ಕವರಾಗಿದ್ದಲೂ ಸಹ ಗಾಂಧಿವೃತ್ತವು ಇಲ್ಲಿಯವರೆಗೆ ಪುನಶ್ಚೇತನಗೊಂಡಿಲ್ಲ. ಇಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ ಕಂಡು ಬರುತ್ತಿದೆ. ಕಿತ್ತೂರ ರಾಣಿ ಚೆನ್ನಮ್ಮ ರಂಗಮಂದಿರ ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಅದನ್ನು ಪುನಃ ನವೀಕರಣಗೊಳಿಸಿ ಸಂಗೀತ ಪ್ರೇಮಿಗಳಿಗೆ, ನಾಟಕ ಪ್ರೀಯರಿಗೆ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ರಂಗಭೂಮಿಯನ್ನೇ ನಂಬಿಕೊಂಡಿರುವ ರಂಗಕರ್ಮಿಗಳಿಗೆ ಹೊಸ ಜೀವನ ನೀಡಿದಂತಾಗುತ್ತದೆ. ಆದ್ದರಿಂದ ಈ ಎಲ್ಲ ಬೇಡಿಕೆಗಳು ಈಡೇರುವವರೆಗೆ ಈ ಹೋರಾಟವನ್ನು ಕೊನೆಗೊಳಿಸುವದಿಲ್ಲವೆಂದು ತಿಳಿಸಿದರು.
ಪಿಂಟು ಗಬ್ಬೂರ, ಸಿದ್ದರಾಜ ಹೋಳಿ, ಮುಕಾದಾಸ್ ಇನ್ನಾಮದಾರ, ಚನ್ನಪ್ಪಗೌಡ ಎಸ್, ಬಿರಾದಾರ, ಚನ್ನಪ್ಪಗೌಡ ಎಸ್, ಬಿರಾದಾರ, ರೀಯಾಜ ಪಾಂಡು, ಶಿವರಾಜಗೌಡ ಪಾಟೀಲ, ಆನಂದ ಹೂನ್ನೂರ, ಉಮೇಶ ಚಲವಾದಿ, ಅಶೋಕ ಕೊಡಗ, ಮೀಣಾ ಕುಂದನಗಾರ, ಶರಣು ಹೂಗಾರ, ಬಸವರಾಜ ಸಿಂಗನಳ್ಳಿ, ಸಿದ್ರಾಮಪ್ಪ ಅವಟಿ, ಸಂತೋಷ ಮನಗೂಳಿ ಹಾಗೂ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

