ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ನೀಡುವ ” ಜಾನಪದ ಪ್ರಪಂಚ ” ಪ್ರಶಸ್ತಿಗೆ ಕೊಲ್ಹಾರ ತಾಲೂಕಿನ ಹಣಮಾಪುರ ಗ್ರಾಮದ ಹಲಗೆ ಮಜಲು ಕಲಾವಿದ ಗಂಗಾಧರ ಹಣಮಂತ ಬಡಿಗೇರ ಆಯ್ಕೆಯಾಗಿದ್ದಾರೆ.
ಗ್ರಾಮದೇವಿ ಹಲಗೆ ಮಜಲು ಸಂಘ ಕಟ್ಟಿಕೊಂಡು ಸುಮಾರು 30 ವರ್ಷಗಳಿಂದ ರಾಜ್ಯದ ತುಂಬೆಲ್ಲಾ ಕಲಾಪ್ರದರ್ಶನ ನೀಡುತ್ತಾ ಮತ್ತು ಯುವಕರಿಗೆ ತರಬೇತಿ ನೀಡುತ್ತಾ ಜಾನಪದ ಕಲೆ ಉಳಿಸುತ್ತ ಬಂದಿದ್ದಾರೆ.
ಪ್ರಸ್ತುತ ಕನ್ನಡ ಜಾನಪದ ಪರಿಷತ್ ಇವರ ಸಾಧನೆ ಮೆಚ್ಚಿ ಆಯ್ಕೆ ಮಾಡಲಾಗಿದೆ. ಅ.26 ರಂದು ಬೆಂಗಳೂರಿನ ಸೇಂಟ್ ಲಾರೆನ್ಸ್ ಸಭಾ ಭವನದಲ್ಲಿ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿಯವರ ನೇತೃತ್ವದಲ್ಲಿ ಪ್ರಶಸ್ತಿ , ಸ್ಮರಣಿಕೆ ಮತ್ತು 5000 ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತ ಗಂಗಾಧರ ಬಡಿಗೇರವರಿಗೆ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ, ವಲಯ ಘಟಕ ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

