ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳ್ಳತನ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ ಪೊಲೀಸರು ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದು ಪೊಲೀಸ್ ಹಿರಿಯ ಅಧಿಕಾರಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೈಕ್ ಕಳ್ಳತನವಾದ ಬಗ್ಗೆ ಬಂದ ದೂರಿನ ಬೆನ್ನಟ್ಟಿದ ಪೊಲೀಸ್ ತಂಡ ಪ್ರಕರಣ ಆರೋಪಿ ಮೂಲತಃ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸಧ್ಯ ಆಶ್ರಯ ಕಾಲೋನಿಯಲ್ಲಿ ವಾಸವಾಗಿದ್ದ ಸಿಕಂದರ ನಾಯ್ಕೋಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿ ಈತನಿಂದ ಒಂದು ಹೋಂಡಾ ಶೈನ್, ಒಂದು ಹೀರೋ ಹೋಂಡಾ ಸ್ಪೆಂಡ್ಲರ್ ಪ್ಲಸ್, ಒಂದು ಬಜಾಜ್ ಪ್ಲಾಟೀನಾ ಹೀಗೆ ಮೂರು ಬೈಕ್‌ಗಳು ಮತ್ತು ೫ಗ್ರಾಂ ತೂಕದ ಒಂದು ೦೭ ಪೀಸ್ ಬಂಗಾರದ ಸರ, ೫ಗ್ರಾಂ ತೂಕದ ಬಂಗಾರದ ನಾಣ್ಯ, ೨೫ಗ್ರಾಂ ತೂಕದ ಒಂದು ಚಪ್ಪಲಾರ, ಒಂದು ಜೊತೆ ಕಿವಿಯಲ್ಲಿನ ಜುಮಕಿ, ೫ಗ್ರಾಂ ತಾಳಿಯ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಂಡದಲ್ಲಿನ ಪೊಲೀಸ್ ಉಪಾಧೀಕ್ಷಕ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಆರ್‌ಎಲ್ ಮನ್ನಾಬಾಯಿ ಹಾಗೂ ಸಿಬ್ಬಂದಿಗಳಾದ ಬಿ.ಕೆ.ಗುಡಿಮನಿ, ಆರ್.ಎಸ್.ಪಾಟೀಲ, ವ್ಹಿ.ಎನ್.ಹಾಲಗಂಗಾಧರಮಠ, ರಮೆಶ ಮದರಿ ಇವರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಪ್ರಶಂಶನಾ ಪತ್ರದೊಂದಿಗೆ ನಗದು ಬಹುಮಾನ ಘೋಷಿಸಿದರೆ ಬೆಲೆ ಬಾಳುವ ವಸ್ತುಗಳನ್ನು ಇಲಾಖಾ ಸುಪರ್ದಿಗೆ ಒಪ್ಪಿಸುವಲ್ಲಿ ಪ್ರಾಮಾಣಿಕತೆ ಮೆರೆದಿದ್ದಕ್ಕಾಗಿ ಸಾರ್ವಜನಿಕರು ಶ್ಲಾಘಿಸಿದ್ದಾರೆ.

