ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಮಹಾತ್ಮ ಗಾಂಧೀಜಿ ಪ್ರೌಢಶಾಲೆಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 84ನೇ ಜಯಂತಿ ಕಾರ್ಯಕ್ರಮ ಜರುಗಿತು
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹೊನವಾಡ ಗ್ರಾಮದ ಪ್ರವಚನಕಾರ ಬಾಬುರಾವ್ ಮಹಾರಾಜರು, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಸರಳತೆಯ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದರು. ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಮ್ಮ ನಾಡು ಪುಣ್ಯ ಭೂಮಿ. ಈ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿ ನಾವು ಕನ್ನಡ ಮಣ್ಣಿನ ಋಣ ತೀರಿಸಬೇಕು. ಎಲ್ಲ ಭಾಷೆ ಕಲಿಯೋಣ ಅದು ಇಂದಿನ ದಿನಗಳಲ್ಲಿ ಅವಶ್ಯಕ. ಆದರೆ ಕನ್ನಡ ಭಾಷೆ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಧೃಡ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬಾನಗರದ ಮಹಾತ್ಮ ಗಾಂಧೀಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾವಸಾಬ ಬಿರಾದಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಶೀನಾಥ್ ಮೊಗಲಿ ವೇದಿಕೆಯ ಮೇಲಿದ್ದರು.
ಕು.ಅಮೃತಾ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ಬೀರಪ್ಪ ಖಂಡೇಕಾರ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಿಂಗಪ್ಪ ಕಲಘಟಗಿ ವಂದಿಸಿದರು.
ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

