ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಕ್ಕಳು ಬೆಳೆಯುತ್ತಾ ಹೋದಂತೆ ಮಾತಿನ ನಡುವೆ ತೊದಲುತ್ತಿದ್ದರೆ ಪೋಷಕರು ಇದನ್ನು ತಿದ್ದುವ ಪ್ರಯತ್ನ ಮಾಡಬೇಕು. ಇಲ್ಲವೇ ಅದಕ್ಕೆ ಸರಿಯಾದ ಚಿಕಿತ್ಸೆ ಕೊಡಿಸುವದು ಬಹಳ ಮುಖ್ಯವಾಗಿದೆ ಎಂದು ಸಮುದಾಯ ಆರೋಗ್ಯ ಅಧಿಕಾರಿ ಶರಣುಬಸು ಗುದ್ದಿ ಹೇಳಿದರು.
ತಾಲೂಕಿನ ದಿಂಡವಾರ ಗ್ರಾಮದ ತಿಮ್ಮಾಪುರ ಬಡಾವಣೆಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ತೊದಲುವಿಕೆ ಅಭ್ಯಾಸವಾಗಿ ಬಿಟ್ಟರೆ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಾಕಷ್ಟು ಅವಮಾನಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಸಮಾಜವು ಆ ವ್ಯಕ್ತಿಗಳು ಮಾತನಾಡುವ ರೀತಿಗೆ ತಮಾಷೆ ಮಾಡಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ತೊದಲುವಿಕೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ ೨೨ ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಶಾಲೆಯ ಮುಖ್ಯಗುರು ಮಹಿಬೂಬ ನದಾಫ ಮಾತನಾಡಿ, ತೊದಲುವಿಕೆಯಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಜನರನ್ನು ನಾವು ಸುತ್ತಮುತ್ತಲೂ ನೋಡುತ್ತೇವೆ. ಈ ವ್ಯಕ್ತಿಗಳನ್ನು ಗೇಲಿ ಮಾಡುವವರ ಸಂಖ್ಯೆಯೇ ಹೆಚ್ಚು. ತೊದಲುವಿಕೆಯು ಒಂದು ಮಾತಿಗೆ ಸಂಬಂಧಿಸಿದ ಒಂದು ಅಸ್ವಸ್ಥತೆ ಎಂಬುವದನ್ನು ಅರಿತುಕೊಂಡು ಅವರನ್ನು ಗೇಲಿ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಚ್.ಐ.ಕುರುಣದ, ಶ್ರೀಶೈಲ ನಾಗೂರ ಇತರರು ಇದ್ದರು.

