ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ & ೨೦೦ನೇ ವಿಜಯೋತ್ಸವ ಆಚರಣೆ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ ೨೦೦ನೇ ವಿಜಯೋತ್ಸವ ಆಚರಣೆಯನ್ನು ಭವ್ಯವಾದ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಆಚರಿಸೋಣ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಹೇಳಿದರು.
ಪಟ್ಟಣದ ಇಂಡಿ ರಸ್ತೆಯ ದಾನಗೊಂಡ ಬಡಾವಣೆಯಲ್ಲಿ ಭಾನುವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ ೨೦೦ನೇ ವಿಜಯೋತ್ಸವ ಆಚರಣೆ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಯಂತ್ಯುತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮುದಾಯದ ಯುವಕರನ್ನು ಒಳಗೊಂಡು ಎಲ್ಲ ಪ್ರಮುಖರು ಭಾಗವಹಿಸಿ ಶೋಭೆ ತರುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ಇಂದು ಎಲ್ಲ ಶರಣರು, ಮಹನೀಯರನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ಖೇದಕರ. ಇಂಥ ರೂಢಿ ಬದಲಾಗಬೇಕು. ರಾಣಿ ಚನ್ನಮ್ಮ ದೇಶದ ಹೆಮ್ಮೆಯ ವೀರಮಾತೆ, ವೀರಮಾತೆಯ ಜಯಂತಿ ಹಾಗೂ ವಿಜಯೋತ್ಸವದಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು ಎಂದರು.
ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಗುರುರಾಜ್ ಆಕಳವಾಡಿ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ವೀರೇಶ ಕುದರಿ, ನಾಗೇಶ ನಾಗೂರ, ಕಲ್ಲನಗೌಡ ಬಿರಾದಾರ, ಮಡುಗೌಡ ಬಿರಾದಾರ(ಜಿರ್ಲಿ) ಮಾತನಾಡಿದರು.
ಬಾಬುಗೌಡ ಪಾಟೀಲ(ಜಿಡ್ಡಿಮನಿ), ಶ್ರೀಶೈಲ ದಾನಗೊಂಡ, ಸಂಗಪ್ಪಣ್ಣ ತಡವಲ್, ಪಂಚಾಕ್ಷರಿ ಮಿಂಚನಾಳ, ಕೆ.ಕೆ.ಭಾವಿಮನಿ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ಭೀಮು ನಾಗರಳ್ಳಿ, ಅಪ್ಪುಗೌಡ ಪಾಟೀಲ(ಜಿಡ್ಡಿಮನಿ), ಶ್ರೀಶೈಲ ಯಂಭತ್ನಾಳ, ರವಿ ಕೋಟಿನ್, ಬಸವರಾಜ ಇಂಡಿ, ರಾಮು ದೇಸಾಯಿ, ರಮೇಶ ಮಾಳನೂರ, ಚೇತನ ಇಂಡಿ, ಮಲ್ಲು ಒಂಟೆತ್ತಿನ, ಭೀಮು ಜಲಕತ್ತಿ, ರವಿ ಒಂಟೆತ್ತಿನ ಹಾಗೂ ಸಮುದಾಯದ ಪ್ರಮುಖರು ಇದ್ದರು.

