ಜಿಲ್ಲಾಧಿಕಾರಿ ಟಿ.ಭೂಬಾಲನ್ ನೇತೃತ್ವದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಜಾಗೃತಿ ಜಾಥಾ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಸೇರಿದಂತೆ ಖಾಸಗಿ ಕಚೇರಿ, ಶಾಲೆ, ಆಸ್ಪತ್ರೆ ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಪಲಕ ಅಳವಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳೊಂದಿಗೆ ರವಿವಾರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
ಬೆಳಿಗ್ಗೆ ೧೦ ಗಂಟೆಗೆ ನಗರದ ಸೋಲಾಪುರ ರಸ್ತೆಯಲ್ಲಿರುವ ಬಂಜಾರಾ ಕ್ರಾಸ್‌ದಿಂದ ಆರಂಭಿಸಿ, ಶಿವಾಜಿ ಸರ್ಕಲ್ ಮಾರ್ಗವಾಗಿ ಗಾಂಧಿ ವೃತ್ತದ ವರೆಗೂ ಜಾಥಾ ನೇರವೇರಿತು.
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.೬೦ ರಷ್ಟು ಕನ್ನಡ ಭಾಷೆ ಒಳಗೊಂಡಿರಬೇಕು. ಶೇ.೪೦ ರಷ್ಟು ಉಳಿದ ಭಾಷೆಗಳನ್ನು ಬಳಸಲು ಅವಕಾಶವಿದ್ದು, ಇದೇ ಅಕ್ಟೋಬರ್ ೩೦ರೊಳಗೆ ಜಿಲ್ಲೆಯ ಎಲ್ಲ ನಾಮಫಲಕಗಳು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು. ಅಕ್ಟೋಬರ್ ೩೧ರ ನಂತರ ಕನ್ನಡ ಭಾಷೆ ಒಳಗೊಳ್ಳದ ನಾಮಫಲಕಗಳನ್ನು ಮುಟ್ಟುಗೊಲು ಹಾಕಿ, ಸಂಬಂಧಿಸಿದ ಅಂಗಡಿ, ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಕನ್ನಡ ನಾಮಫಲಕ ನಿಯಮಗಳ ಉಲ್ಲಂಘನೆಗಾಗಿ ಯಾವುದೇ ಕೈಗಾರಿಕಾ, ಅಂಗಡಿ, ವಾಣಿಜ್ಯ ಸಂಸ್ಥೆಯ ಮಾಲೀಕರಿಗೆ ಮೊದಲನೇ ಅಪರಾಧಕ್ಕಾಗಿ ೫,೦೦೦ ದಂಡ, ನಂತರದ ಎರಡನೇ ಅಪರಾಧಕ್ಕಾಗಿ ರೂ.೧೦,೦೦೦ ದವರಗೆ ವಿಸ್ತರಿಸಬಹುದಾದ ದಂಡ, ನಂತರ ಪ್ರತಿಯೊಂದು ಅಪರಾಧಕ್ಕಾಗಿ ರೂ.೨೦,೦೦೦ ರವಗೆಗೆ ದಂಡ ಮತ್ತು ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಾಗೃತಿ ಮೂಡಿಸಲಾಯಿತು.
ಈ ವೇಳೆ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ನೋಟೀಸ್ ನೀಡಿ ಅಕ್ಟೋಬರ್ ೩೧ರ ಒಳಗೆ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಎಚ್ಚರಿಕೆ ನೀಡಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ನಗರಾಭಿವೃದ್ಧಿ ಇಲಾಖೆ ಆಯಕ್ತ ರಾಜಶೇಖರ ಡಂಬಳ, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿ ನಿಂಗಪ್ಪ ಗೋಠೆ, ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ. ಎಲ್, ಮಹನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ್, ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಿನುತಾ, ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ್ ಮಾನವರ, ಪಿಯುಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

