ಸೂರ್ಯ ಫೌಂಡೇಶನ್ ನಿಂದ ಮಹತ್ತರ ಹೆಜ್ಜೆ | ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಯಶಸ್ವಿ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ನಿರುದ್ಯೋಗ ಕ್ಷೇತ್ರದಲ್ಲಿ ಸುಧಾರಣೆಗೆ ಅಗಾಧ ಅವಕಾಶವಿದ್ದು, ನಾಡಿನ ನಿರುದ್ಯೋಗಿ ಯುವಕ,
ಯುವತಿಯರಿಗೆ ಮತ್ತು ಪದವೀಧರರಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳ ಮೂಲಕ ಉದ್ಯೋಗಾವಕಾಶ ಕಲ್ಪಿಸಿ, ಕುಟುಂಬದ ಆರ್ಥಿಕತೆಯನ್ನು ಬಲಪಡಿಸುವದೇ ನಮ್ಮ ಸೂರ್ಯ ಫೌಂಡೇಶನ್ ಮುಖ್ಯ ಗುರಿಯಾಗಿದೆ ಎಂದು ಸೂರ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸೋಮೇಶ್ ನವೋದಯ ಹೇಳಿದರು.
ಅವರು ನಗರದ ಹೆಸರಘಟ್ಟದ ಹುರುಳಿ ಚಿಕ್ಕನಹಳ್ಳಿಯಲ್ಲಿರುವ ಇಂಡೋಗ್ಲೋಬ್ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ, ಇಂಡೋಗ್ಲೋಬ್ ಇನ್ ಸ್ಟಿಟ್ಯೂಷನ್ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಸಹಯೋಗದಲ್ಲಿ ಜರುಗಿದ ‘ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ’ದ ಎರಡನೇ ದಿನದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸೂರ್ಯ ಫೌಂಡೇಶನ್ ಮೂಲಕ ನಿರುದ್ಯೋಗಿ ಯುವಕರಿಗೆ ಅವರ ಇಚ್ಚೆಯನುಸಾರ ಉದ್ಯೋಗಕ್ಕೆ ಸಂಬಂಧಿತ ಕೌಶಲ್ಯಗಳು ಮತ್ತು ತರಬೇತಿಯನ್ನು ನೀಡಿ, ಸ್ವಯಂ ಪ್ರೇರಿತರಾಗಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ನಾಡಿನ ಎಲ್ಲ ವಿದ್ಯಾವಂತ ನಿರುದ್ಯೋಗಿ ಯುವಕರು ಹಾಗೂ ಪದವೀಧರರು ಈ ಅವಕಾಶದ ಸದುಪಯೋಗ ಮಾಡಿಕೊಂಡು, ತಮ್ಮ ಕುಟುಂಬದ ಆರ್ಥಿಕ ಬೆನ್ನೆಲುಬಾಗಿ ಪರಿವರ್ತನೆ ಹೊಂದಬೇಕು ಎಂದು ಹೇಳಿದರು.
ಈ ಶೈಕ್ಷಣಿಕ ಸಮ್ಮೇಳನದ ಮೂಲಕ ರಾಜ್ಯದ ವಿವಿಧ ಜಿಲ್ಲಾ ಸಂಯೋಜಕರು,ತಾಲೂಕು ಪ್ರಧಾನ ಸಂಯೋಜಕರು ಮತ್ತು ತಾಲೂಕು ಸಂಯೋಜಕರುಗಳಿಗೆ ‘ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅದೇ ರೀತಿಯಲ್ಲಿ 11 ವಿಭಾಗದಲ್ಲಿ 240 ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಇಂಡೋಗ್ಲೋಬ್ ಇನ್ ಸ್ಟಿಟ್ಯೂಷನ್ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಗೌಡ ಮಾತನಾಡಿ, ಇಂದಿನ ದಿನಗಳಲ್ಲಿ ಉದ್ಯೋಗಾವಕಾಶ ಮರಿಚೀಕೆಯಾಗುತ್ತಿರುವ ಸಂದರ್ಭದಲ್ಲಿ ಸೂರ್ಯ ಫೌಂಡೇಶನ್ ಮಹತ್ತರ ಹೆಜ್ಜೆಯನ್ನಿಟ್ಟು, ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗಿದೆ. ಇದರ ಸದುಪಯೋಗ ಇಡೀ ರಾಜ್ಯದ ಮೂಲೆ ಮೂಲೆಗೂ ತಲುಪಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಪ್ರತಿಭಾನ್ವಿತ ಉತ್ತಮ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಉತ್ತಮ ಶಾಲಾ-ಕಾಲೇಜುಗಳಿಗೆ, ಉತ್ತಮ ತರಬೇತುದಾರರಿಗೆ, ಉತ್ತಮ ನಿರೂಪಕ ಶಿಕ್ಷಕರಿಗೆ,
ಅತ್ಯುತ್ತಮ ಶಾಲೆಗಳಿಗೆ, ಉತ್ತಮ ಉಪನ್ಯಾಸಕರಿಗೆ,
ಉತ್ತಮ ಪ್ರೌಢಶಾಲಾ ಶಿಕ್ಷಕರಿಗೆ, ಉತ್ತಮ ಮುಖ್ಯ ಶಿಕ್ಷಕರಿಗೆ ಉತ್ತಮ ಸಿಆರ್ಪಿ, ಬಿಆರ್ಪಿ, ಬಿಐಆರ್ಟಿ ಗಳಿಗೆ, ಸಾಧಕ ಮಹಿಳೆಯರಿಗೆ, ಯುವ ಸಾಧಕರಿಗೆ ಸೂರ್ಯ ಫೌಂಡೇಶನ್ ವತಿಯಿಂದ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಷಿಯೇಷನ್ ಅಧ್ಯಕ್ಷರಾದ ಗಂಡಸಿ ಸದಾನಂದಸ್ವಾಮಿ, ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಅಧ್ಯಕ್ಷ ಪಿ ಮಹೇಶ್, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಎಜಿಎಸ್ ಕಾರ್ಟ್ ಪ್ರೈ,ಲಿ.ನ ಸಂಸ್ಥಾಪಕರಾದ ವಿನಯಕುಮಾರ್ ಹಾಗೂ ದೀಲಿಪ್ ಕುಮಾರ್ ಆರ್, ವೃದ್ಧಿ ಲರ್ನಿಂಗ್ ಎಕ್ಸ್ ಚೇಂಜ್ ನ ಸಂಸ್ಥಾಪಕರಾದ ಸಂದೀಪ್ ವಿಜಯನ್ ಆಗಮಿಸಿದ್ದರು.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಎಸ್ ಬಂಡೆ, ರಾಜ್ಯ ಉಪಾಧ್ಯಕ್ಷರಾದ ವ್ಹಿ ಜಿ ಅಗ್ರಹಾರ, ರೇಖಾ ದಳವಾಯಿ, ಹಿರಿಯ ನಿರ್ದೇಶಕ ನಾಗಪ್ಪ ಮುಶೆಪ್ಪನವರ, ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ನಾಯಕ್, ರಾಜ್ಯ ಸಹಕಾರ ಸಮಿತಿಯ ಮುಖ್ಯಸ್ಥೆ ಉಮಾ ಗುಡ್ಡದ ಸೇರಿದಂತೆ ಪ್ರತಿಭಾ ಪರಿಷತ್ತಿನ ವಿವಿಧ ಸಮಿತಿಯ ಮುಖ್ಯಸ್ಥರು, ಮಾರ್ಗದರ್ಶಕರು, ಸದಸ್ಯರು ಉಪಸ್ಥಿತರಿದ್ದರು.

