ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದಲ್ಲಿ ಅನೇಕ ಜನರಿಗೆ ರಕ್ತದ ಅವಶ್ಯಕತೆ ಇದೆ. ಅಪಘಾತ ಅವಘಡ ಸಂಭವಸಿದ ಸಂದರ್ಭ, ವಿವಿಧ ರೋಗಗಳಿಂದ ಬಳಲುತ್ತಿರುವಾಗ ಒಂದು ಯುನಿಟ್ ರಕ್ತಕ್ಕಾಗಿ ಹೋರಾಟ ನಡೆದಿರುತ್ತದೆ. ಹಾಗಾಗಿ ನಾವೆಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಈದ್-ಮಿಲಾದ್ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತ ಜರೀನಾ ತಾಂಬೆ, ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ವಿಜಯಪುರ ಜಿಲ್ಲಾ ರಕ್ತ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಎಂಬುದು ಜೀವದಾನ. ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದಾನ ಮಾಡುವುದಕ್ಕೆ ಮುಂದಾಗಬೇಕು ಎಂದರು.
ಈ ವೇಳೆ ೨೫ಕ್ಕೂ ಅಧಿಕ ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಡಾ.ಮಹ್ಮದ ಇಸಾಕ್, ರಾಜಶೇಖರ ನರಗೊದಿ, ಜರೀನಾ ತಾಂಬೆ, ಡಾ.ರವಿ ಗೋಲಾ, ಭೀಮು ವಾಲೀಕಾರ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸೈಪನ ನಾಟೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

