ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ರಸ್ತೆ ಹಾಗೂ ಸಾರ್ವಜನಿಕ ಜಾಗಗಳನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳ ಅನಧಿಕೃತ ಭಾಗಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ವತಿಯಿಂದ ನ.೨೩ ಮತ್ತು ೨೪ರಂದು ನಡೆಸಲಾಗಿದ್ದು, ಎರಡು ದಿನಗಳಲ್ಲಿ ಒಟ್ಟು ೭೯ ಕಟ್ಟಡಗಳ ಅತಿಕ್ರಮಿತ ಭಾಗಗಳನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.
ನಗರದ ವಾರ್ಡ್ ಸಂಖ್ಯೆ ೨೭, ೨೮ ಹಾಗೂ ೩೦ರ ವ್ಯಾಪ್ತಿಯ ಖಾದಿ ಗ್ರಾಮೋದ್ಯೋಗದಿಂದ ಅಲಿಖಾ ರೋಜಾ ಸ್ಮಾರಕದ ಮಾರ್ಗ, ಅಥಣಿ ಗಲ್ಲಿ, ಸಕಾಫ್ ರೋಜಾ ಹಾಗೂ ಖಾಸಗೇರಿ ಓಣಿಗಳಲ್ಲಿ ಸಾರ್ವಜನಿಕ ರಸ್ತೆ ಮತ್ತು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡಗಳ ಭಾಗಗಳನ್ನು ನಿರ್ಮಿಸಲಾಗಿತ್ತು. ಇವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆಯ ಭದ್ರತೆಯೊಂದಿಗೆ ಕೈಗೊಳ್ಳಲಾಯಿತು.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ವಿಜಯಪುರ ಮಹಾನಗರ ಪಾಲಿಕೆಗೆ ಈಗಾಗಲೇ ೧೫೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಡಿ ನಗರದ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ವಿವಿಧ ವಾರ್ಡ್ಗಳ ರಸ್ತೆಗಳನ್ನು ಉನ್ನತೀಕರಿಸುವುದು ಹಾಗೂ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಸಾರ್ವಜನಿಕ ಜಾಗಗಳನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವ ವಾರ್ಡ್ ಸಂಖ್ಯೆ ೨೭, ೨೮ ಮತ್ತು ೩೦ರ ವ್ಯಾಪ್ತಿಯ ಸುಮಾರು ೭೯ ಅತಿಕ್ರಮಣದಾರರಿಗೆ, ಅತಿಕ್ರಮಿತ ಕಟ್ಟಡದ ಭಾಗಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳುವಂತೆ ಮಹಾನಗರ ಪಾಲಿಕೆಯಿಂದ ನೋಟಿಸ್ ನೀಡಿ ಸೂಚಿಸಲಾಗಿತ್ತು. ಆದರೆ, ನೋಟಿಸ್ ನೀಡಿದರೂ ಅತಿಕ್ರಮಿತ ಭಾಗಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು.
ನ.೨೩ರಂದು ವಾರ್ಡ್ ಸಂಖ್ಯೆ ೨೮ರ ಖಾದಿ ಗ್ರಾಮೋದ್ಯೋಗದಿಂದ ಅಲಿಖಾ ರೋಜಾ ಸ್ಮಾರಕದವರೆಗಿನ ಮಾರ್ಗದಲ್ಲಿ ಸಾರ್ವಜನಿಕ ರಸ್ತೆ ಹಾಗೂ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ೨೬ ಕಟ್ಟಡಗಳ ಅನಧಿಕೃತ ಭಾಗಗಳನ್ನು ತೆರವುಗೊಳಿಸಲಾಯಿತು. ನ.೨೪ರಂದು ವಾರ್ಡ್ ಸಂಖ್ಯೆ ೨೭ ಮತ್ತು ೩೦ರ ಅಥಣಿ ಗಲ್ಲಿ, ಸಕಾಫ್ ರೋಜಾ ಹಾಗೂ ಖಾಸಗೇರಿ ಓಣಿಗಳಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಲಾಗಿದ್ದ ೫೩ ಕಟ್ಟಡಗಳ ಅನಧಿಕೃತ ಭಾಗಗಳನ್ನು ತೆರವುಗೊಳಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಅಧೀಕ್ಷಕ ಅಭಿಯಂತರ ಇ. ತಿಮ್ಮಪ್ಪ, ವಲಯ ಆಯುಕ್ತರಾದ ಮೋಹನ ಜಾಧವ, ಎಚ್.ಎಸ್. ಚಿತ್ತರಗಿ, ಕಾರ್ಯಪಾಲಕ ಅಭಿಯಂತರರಾದ ವಿಠಲ ಹೊನ್ನಳ್ಳಿ, ಪರಿಮಳಾ ಚಿಮ್ಮಲಗಿ ಸೇರಿದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಂದಾಯ ಅಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಆಯುಕ್ತ ವಿಜಯ ಮೆಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

