ಸಿಂದಗಿಯ ಶ್ರೀಗುರುಕೃಪಾ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ | ಬಿಸಿಯೂಟ ಸಹಾಯಕ ನಿರ್ದೇಶಕ ಅರವಿಂದ ಡೋಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಬಿಸಿಯೂಟ ಸಹಾಯಕ ನಿರ್ದೇಶಕ ಅರವಿಂದ ಡೋಣೂರ ಅಭಿಪ್ರಾಯಪಟ್ಟರು.
ಸಿಂದಗಿ ನಗರದ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸಿಂದಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಎಂಬುದು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಮಹತ್ವದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸ್ಪರ್ಧಾ ಕಾರ್ಯಕ್ರಮವಾಗಿದೆ. ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಕೆಲವರು ಹಾಡುಗಾರಿಕೆಯಲ್ಲಿ, ಇನ್ನು ಕೆಲವರು ನೃತ್ಯ, ಚಿತ್ರಕಲೆ, ಭಾಷಣ, ಅಭಿನಯ, ಸಾಹಿತ್ಯ, ಕವನ ರಚನೆ ಹಾಗೂ ಕಥೆ ಹೇಳುವಿಕೆಯಲ್ಲಿ ಆಸಕ್ತಿ ಮತ್ತು ಸಾಮರ್ಥ್ಯ ಹೊಂದಿರುತ್ತಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದೇ ಪ್ರತಿಭಾ ಕಾರಂಜಿಯ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ವೇಳೆ ಇಸಿಒ ಬಿ.ಬಿ.ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಮಕ್ಕಳಲ್ಲಿ ಜೀವನ ಕೌಶಲ್ಯ, ಸಂವಹನ ಸಾಮರ್ಥ್ಯ, ನಾಯಕತ್ವ ಗುಣ, ಸೃಜನಶೀಲ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸುತ್ತದೆ ಎಂದರು.
ಈ ವೇಳೆ ಬಿಆರ್‌ಪಿ ಜೆ.ಎಸ್.ಅಲ್ದಿಮಠ, ಸಿಆರ್‌ಪಿ ಸಂಘದ ಅಧ್ಯಕ್ಷ ರಾಜು ಭೂಸನೂರ, ಪತ್ರಕರ್ತ ರಮೇಶ ಪೂಜಾರ, ಎನ್.ವಿ.ಕುಲಕರ್ಣಿ, ಸಿದ್ರಾಮ ಬಡಿಗೇರ, ಹಣಮಂತ ಪೋದ್ದಾರ, ಪ್ರಸನ್ನ ಕುಲಕರ್ಣಿ, ಹರೀಶ ಪೋದ್ದಾರ, ಸೌಮ್ಯ ಪೋದ್ದಾರ, ದೀಪಾ ಹಿರೇಮಠ, ಸವಿತಾ ಬನಗುಡಿ, ಸುಕನ್ಯಾ ಹುಬ್ಬಳ್ಳಿ, ಸ್ವರೂಪ, ಶಿವರಾಜ, ರಾಜಶೇಖರ ಬಿರಾದಾರ, ಮೇಘಾ, ಭಾರತಿ ಬಿರಾದಾರ, ಸಮ್ರತಾ ಎ,. ಜ್ಯೋತಿ ಪಾಟೀಲ, ಅಕ್ಷತಾ ಕುಲಕರ್ಣಿ ಸುಜಾತಾ ಜೈನ, ರಾಜಶೇಖರ ಕಾಂಬಳೆ, ಎ.ಕೆ.ಬಿರಾದಾರ, ಸಿಆರ್‌ಪಿ ಎನ್.ಎಸ್.ತಿಳಗೂಳ ಸ್ವಾಗತಿಸಿದರು. ಶೃತಿ ಪೋದ್ದಾರ ಹಾಗೂ ಶರಣಬಸವ ಲಂಗೋಟಿ ನಿರೂಪಿಸಿದರು. ಜಗದೀಶ ಸಿಂಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು. ಶಿಕ್ಷಕರು, ಶಾಲಾ ಸಿಬ್ಬಂದಿ ಹಾಗೂ ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

