ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದಷ್ಟೇ ಅಲ್ಲ. ಶಿಕ್ಷಕರಲ್ಲಿರುವ ವಿವಿಧ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸೃಜನಶೀಲ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದೂ ಶಿಕ್ಷಣ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಸಹಪಠ್ಯ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್. ಬಿರಾದಾರ ಹೇಳಿದರು.
ಸಿಂದಗಿ ನಗರದ ಬಂದಾಳ ರಸ್ತೆಯಲ್ಲಿರುವ ಶ್ರೀ ಸಂಗಮೇಶ್ವರ ವಿದ್ಯಾಸಂಸ್ಥೆಯ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಹಯೋಗದೊಂದಿಗೆ ಶಿಕ್ಷಕರಿಗಾಗಿ ಹಮ್ಮಿಕೊಂಡ ವಿಶೇಷ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ಅವರು ಬಹುಮುಖ ಪ್ರತಿಭೆಯ ಸೃಜನಶೀಲ ವ್ಯಕ್ತಿತ್ವಗಳಾಗಿದ್ದಾರೆ. ಶಿಕ್ಷಕರಲ್ಲಿರುವ ವಿಭಿನ್ನ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದರಿಂದ ಅವರ ವೃತ್ತಿಪರ ಬೆಳವಣಿಗೆಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ ವಿದ್ಯಾರ್ಥಿಗಳಿಗೂ ಹೊಸ ಚಿಂತನೆ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ ಎಂದರು.
ಈ ವೇಳೆ ನೋಡಲ್ ಅಧಿಕಾರಿ ಎಸ್.ಎಂ.ಕಪ್ಪನಿಂಬರಗಿ ಪ್ರಾಸ್ತಾವಿಕ ಮಾತನಾಡಿ, ಸಹಪಠ್ಯ ಚಟುವಟಿಕೆಗಳು ಶಿಕ್ಷಕರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುತ್ತವೆ. ಅಲ್ಲದೆ, ಶಿಕ್ಷಕರ ನಡುವೆ ಪರಸ್ಪರ ಸ್ನೇಹ, ಸಹಕಾರ ಮತ್ತು ಸೌಹಾರ್ದತೆಯನ್ನು ವೃದ್ಧಿಸುವುದರೊಂದಿಗೆ ಬೋಧನಾ ಕೌಶಲ್ಯದಲ್ಲಿಯೂ ಹೊಸತನ ಮೂಡಿಸುತ್ತವೆ. ಆದ್ದರಿಂದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳನ್ನು ಕೇವಲ ಮನರಂಜನೆಯ ಕಾರ್ಯಕ್ರಮಗಳಾಗಿ ಪರಿಗಣಿಸದೆ, ಶಿಕ್ಷಕರ ವ್ಯಕ್ತಿತ್ವ ವಿಕಸನ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮಹತ್ವದ ವೇದಿಕೆಯಾಗಿ ರೂಪಿಸಬೇಕಿದೆ. ಶಿಕ್ಷಕರ ಪ್ರತಿಭೆಗೆ ಪ್ರೋತ್ಸಾಹ ದೊರೆತಾಗ ಶಿಕ್ಷಣ ಕ್ಷೇತ್ರದಲ್ಲಿಯೂ ಹೊಸತನ ಮತ್ತು ಸೃಜನಶೀಲತೆಗೆ ಅವಕಾಶ ತೆರೆದುಕೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂದಗಿ ವಲಯದ ಇಸಿಒ ಎಸ್.ಐ.ರಾಂಪೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಲಕ್ಷö್ಮಣ ಸೊನ್ನ, ಎನ್‌ಜಿಒ ಅಧ್ಯಕ್ಷ ಸಿ.ಬಿ.ಗಡಗಿ, ಕಾರ್ಯಕ್ರಮದಲ್ಲಿ ಜಿಪಿಟಿ ಶಿಕ್ಷಕ ಮಹಾಂತೇಶ ಬಾಗೇವಾಡಿ, ಮದನ್ ಪೂಜಾರಿ, ಮಂಜುನಾಥ ಜಾಧವ, ಭಾಗೇಶ ಗೋಲಗೇರಿ, ಆನಂದ ಪೂಜಾರಿ, ಡಿ.ಡಿ.ಮುಲ್ಲಾ, ಬಿ.ಬಿ.ಪಾಟೀಲ, ವೈ.ಎಂ.ಬಿರಾದಾರ, ಪಿ.ಎಸ್.ಅಗ್ನಿ, ಬುಲ್ಲಪ್ಪ ಡಿ., ಸೇರಿದಂತೆ ನಿರ್ಣಾಯಕರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ೧೦೨ ಶಾಲೆಗಳ ೧೪೮ ಶಿಕ್ಷಕರು ಪಾಲ್ಗೊಂಡು ವಿವಿಧ ಸಹಪಠ್ಯ ಚಟುವಟಿಕೆ ಹಾಗೂ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಪ್ರವೀಣ ಪಡಶೆಟ್ಟಿ ಪ್ರಾರ್ಥಿಸಿದರು. ಸಂಗಮೇಶ್ವರ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಗುರುನಾಥ ಅರಳಗುಂಡಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬಿ.ವಿ.ಹಿರೇಮಠ ನಿರ್ವಹಿಸಿದರು.

