ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಬ್ಯಾಕೋಡ ಗ್ರಾಮದ ತಾಯಂದಿರು ಗುಡ್ಡಾಪುರ ದಾನಮ್ಮತಾಯಿಯ ಪುರಾಣದ ನಿಮಿತ್ಯ ತಮ್ಮ ಮನೆಗಳಲ್ಲಿ ಭಕ್ತಿಯಿಂದ ಸಿದ್ಧಪಡಿಸಿದ ವಿವಿಧ ಬಗೆಯ ಪ್ರಸಾದವನ್ನು ಹೆಡಿಗೆ (ಬುಟ್ಟಿ) ಗಳಲ್ಲಿ ಹೊತ್ತು ಸಿಂದಗಿಯ ಶ್ರೀ ಸಾರಂಗಮಠಕ್ಕೆ ಆಗಮಿಸಿ ಸಮರ್ಪಿಸಿದರು. ಬಳಿಕ ಮಠದಲ್ಲಿ ಸಮಾವೇಶಗೊಂಡ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದ ದಾಸೋಹ ನೆರವೇರಿಸುವ ಮೂಲಕ ಧಾರ್ಮಿಕ ಸೇವೆಯಲ್ಲಿ ಭಾಗಿಯಾದರು.
ಮನೆಯಿಂದ ಸಿದ್ಧಪಡಿಸಿ ತಂದ ಆಹಾರವನ್ನು ಸಾಮೂಹಿಕವಾಗಿ ಹಂಚಿಕೊಂಡು ಎಲ್ಲರೂ ಒಟ್ಟಾಗಿ ಪ್ರಸಾದ ಸ್ವೀಕರಿಸುವ ಈ ಸಂಪ್ರದಾಯವು ಭಕ್ತಿ, ಭಾವೈಕ್ಯತೆ, ಪರಸ್ಪರ ಪ್ರೀತಿ ಹಾಗೂ ಸಹಬಾಳ್ವೆಯ ಸಂದೇಶ ಸಾರಿತು. ತಾಯಂದಿರ ಭಕ್ತಿಪೂರ್ವಕ ಸೇವೆ ಹಾಗೂ ದಾಸೋಹ ಕಾರ್ಯ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಸಾರಂಗಮಠ-ಗಚ್ಚಿನಮಠದ ಪೀಠಾಧೀಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ ನೂಲ ಗ್ರಾಮದ ಗುರುಸಿದ್ದೇಶ್ವರ ಶಿವಾಚಾರ್ಯರು ಗುಡ್ಡಾಪುರ ದಾನಮ್ಮತಾಯಿ ಕುರಿತು ಪುರಾಣ ಪ್ರವಚನ ನೀಡಿದರು. ಸಿಂದಗಿ ಆದಿಶೇಷಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮೀಜಿಗಳು, ಸಂಗೀತಗಾರ ನಾಗಭೂಷಣ ಶಿವರುದ್ರಯ್ಯ ಕಲಬುರ್ಗಿಮಠ, ತಬಲಾ ವಾದಕ ಸಿದ್ಧರಾಮ ಬ್ಯಾಕೋಡ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

