ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿನ ವಿಶೇಷ ಚೇತನರ ಕ್ರೀಡಾಕೂಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಚೇತನರ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತಾಲ್ಲೂಕುಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಹಾಗೂ ವಿಜಯಪುರದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ತಾಲ್ಲೂಕುಮಟ್ಟದ ಕ್ರೀಡಾಕೂಟಗಳು ನವೆಂಬರ್ ೨೬ರಿಂದ ೩೦ರವರೆಗೆ ವಿವಿಧ ತಾಲ್ಲೂಕುಗಳ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ನವೆಂಬರ್ ೨೬ರಂದು, ವಿಜಯಪುರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ, ಇಂಡಿಯಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ತಾಲ್ಲೂಕ ಕ್ರೀಡಾಂಗಣದಲ್ಲಿ, ನ.೩೦ರಂದು ಸಿಂದಗಿಯಲ್ಲಿ ತಾಲ್ಲೂಕ ಕ್ರೀಡಾಂಗಣದಲ್ಲಿ, ಬಸವನಬಾಗೇವಾಡಿಯ ಎಸ್.ಪಿ. ಪಿ.ಯು. ಕಾಲೇಜು ಮೈದಾನದಲ್ಲಿ ಹಾಗೂ ಮುದ್ದೇಬಿಹಾಳದ ವ್ಹಿ.ಬಿ.ಸಿ. ಹೈಸ್ಕೂಲ್ ಮೈದಾನದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
ಜಿಲ್ಲಾಮಟ್ಟದ ವಿಶೇಷ ಚೇತನರ ಕ್ರೀಡಾಕೂಟವು ಡಿಸೆಂಬರ್ ೧ರಂದು ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಓಟ (ಸಿಂಗಲ್ ಲೆಗ್, ಬಗಲು ಬಡಿಗೆ ಹಾಗೂ ವೀಲ್‌ಚೇರ್ ಬಳಸಿ ಓಡುವ ದೈಹಿಕ ವಿಕಲಚೇತನರಿಗೆ), ಶಾಟ್‌ಪುಟ್, ಡಿಸ್ಕಸ್ ಥ್ರೋ, ಜಾವೆಲಿನ್ (ಸಿಟ್ಟಿಂಗ್-ಸ್ಟ್ರಾಡಿಂಗ್), ಕೇರಂ, ಚೇಸ್, ರಂಗೋಲಿ ಹಾಗೂ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
೧೮ ವರ್ವದೊಳಗಿನ ಹಾಗೂ ೧೮ ವರ್ಷ ಮೇಲ್ಪಟ್ಟ ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ಸ್ಪರ್ಧೆಗಳನ್ನು ನಡೆಸಲಾಗುವುದು. ಪ್ರತಿಯೊಬ್ಬ ಕ್ರೀಡಾಪಟುವಿಗೆ ಗರಿಷ್ಠ ಎರಡು ಕ್ರೀಡೆಗಳಲ್ಲಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಯಾ ತಾಲ್ಲೂಕಿನ ನಿಗದಿತ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ಬೆಳಿಗ್ಗೆ ೯.೩೦ರಿಂದ ೧೧ ಗಂಟೆಯವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಬೆಳಿಗ್ಗೆ ೧೧ ಗಂಟೆಯ ನಂತರ ಆಗಮಿಸುವ ಕ್ರೀಡಾಪಟುಗಳಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ.
ತಾಲ್ಲೂಕುಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಡಿಸೆಂಬರ್ ೧ರಂದು ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಸಂಯೋಜನೆಕಾರರಾದ ವಿಜಯಪುರ ತಾಲ್ಲೂಕಿನ ಶ್ರೀಮತಿ ಪ್ರಿಯಾಂಕ ಜಿ. ಮೊ: ೯೫೩೫೫೦೧೮೭೨, ರವಿ ರಾಠೋಡ ಮೊ:೯೦೩೫೫೫೩೩೩೭, ಇಂಡಿ ತಾಲ್ಲೂಕಿನ ಸಿ.ಎಸ್.ವಾಲಿಕಾರ ೯೮೮೦೧೪೬೨೧೯, ಪರಶುರಾಮ ಬೋಸಲೆ ಮೊ:೯೯೭೨೪೪೧೪೬೪, ಸಿಂದಗಿ ತಾಲ್ಲೂಕಿನ ರಮೇಶ ಬಿರಾದಾರ ಮೊ:೮೧೦೫೮೪೯೩೪೭, ಮುತ್ತುರಾಜ ಸಾತಿಹಾಳ ಮೊ:೯೯೮೦೦೧೯೬೩೫, ಬಸವನ ಬಾಗೇವಾಡಿ ತಾಲ್ಲೂಕಿನ ಎಸ್.ಎಸ್. ಅವಟಿ ಮೊ:೯೬೬೩೨೯೭೬೫೪, ಶಿವಗಂಗವ್ವ ಬಿರಾದಾರ ಮೊ:೮೭೨೨೧೩೫೬೬೦ ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಹನುಮಗೌಡ ಪೀರಪೂರ ಮೊ:೯೯೦೨೯೬೧೭೧೦, ಎಸ್.ಕೆ.ಘಾಟೆ ಮೊ:೯೭೪೦೬೮೨೯೭೯ ಅಥವಾ ಕಾರ್ಯಲಯದ ದೂರವಾಣಿ ಸಂಖ್ಯೆ ೦೮೩೫೨-೨೫೧೦೮೫ – ೭೦೧೯೦೦೮೪೪೩ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
