ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಮೂಡಿಸಿ, ನಮ್ಮ ನೆರೆಹೊರೆಯವರೊಂದಿಗೆ ಹೇಗಿರಬೇಕು, ಇತರೆ ಧರ್ಮಗಳನ್ನು ಗೌರವಿಸಿ, ಅನಾಥ ಮಕ್ಕಳಿಗೆ ಪ್ರೀತಿ ಹಂಚಲು, ಹಸಿದವರಿಗೆ ಅನ್ನ ನೀಡಲು, ತನಗೆ ಕಷ್ಟ ಕೊಟ್ಟವರನ್ನು ಕ್ಷಮಿಸಲು ತಿಳಿಸಿ ಕೊಟ್ಟ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಮುಸ್ಲಿಂ ಬಾಂಧವರು ಸೋಮವಾರ ಸಡಗರ ಸಂಭ್ರಮ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಿದರು.
ಪವಿತ್ರ ಮೆಕ್ಕಾ ಮದೀನಾ ಸ್ಥಬ್ದಚಿತ್ರ ಮೆರವಣಿಗೆಗೆ ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೋಲೀಸ್ ಪಾಟೀಲ್ ಚಾಲನೆ ನೀಡಿದರು.
ಹಿರೇಮಠದ ಪೀಠಾಧಿಪತಿ ಶ್ರೀ ಷ ಬ್ರ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಪ್ರಮುಖರಾದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಮಾಜಿ ತಾಪಂ ಸದಸ್ಯ ಖಾಜಾಪಟೇಲ್ ಕಾಚೂರು, ಎಸ್ ಕೆ,ಅಶೋಕ್ ಸಾಹು ಸೊನ್ನದ, ಶರಣಬಸವ ಡಿಗ್ಗಾವಿ, ಚಂದ್ರಮೌಳಿ ಮಾಲಿ ಪಾಟೀಲ್, ಪುರಸಭೆ ಸದಸ್ಯರಾದ ರವಿಶಂಕರ ಸೊನ್ನದ, ರಹಿಮಾನ್ ಪಟೇಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಟ್ಟಣದ ಮೆಕ್ಕಾ ಮಸೀದದಿಂದ ಮುಖ್ಯ ಬಜಾರ್, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಮುಹಮ್ಮದ್ ಪೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರದ ಮೆರವಣಿಗೆ ನಡೆಯಿತು, ಮೆರವಣಿಗೆಯುದ್ದಕ್ಕೂ ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತಾದ ಹಾಡುಗಳಿಗೆ ಯುವಕರು ಸೇರಿದಂತೆ ಹಿರಿಯರು ಹೆಜ್ಜೆ ಹಾಕಿದರು.
ಮುಸ್ಲಿಂ ಬಾಂಧವರು ತಮ್ಮ ತಮ್ಮ ಬಂಧುಬಳಗ, ಗೆಳೆಯರ ಬಳಗದಲ್ಲಿ ಶುಭಾಶಯ ವಿನಿಮಯ ಮಾಡಿಕೊಂಡರು. ಹಲವರು ವಿವಿಧೆಡೆ ಸಿಹಿ ಪಾನಿಯಾ ನೀಡಿ ಸಂತಸ ಪಟ್ಟರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

