ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಹಾಲು ಪರೀಕ್ಷಾ ಕೇಂದ್ರಗಳನ್ನು (ಲ್ಯಾಬ್) ಸ್ಥಾಪಿಸಲು ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕೆಮಿಕಲ್ ಮಿಶ್ರಿತ ವಿಷಯುಕ್ತ ಹಾಲು ವಿತರಣೆಯಾಗುತ್ತಿದ್ದು, ಅದನ್ನು ತಡೆಗಟ್ಟಲು ಆಗ್ರಹಿಸಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಗುರುವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು, ಹಲವಾರು ತಿಂಗಳುಗಳಿಂದ ನಮ್ಮ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ನೆರೆಯ ಮಹಾರಾಷ್ಟ್ರದಿಂದ ಮತ್ತು ಬೇರೆ ತಾಲೂಕುಗಳಿಂದ ಕೆಮಿಕಲ್ ನಿಂದ ತಯಾರಿಸಿದ ಹಾಲು ಪೂರೈಸುತ್ತಿರುವುದು ಕಂಡು ಬಂದಿದೆ. ಯಾವುದೇ ಕಂಪನಿಯ ಪ್ಯಾಕೇಟ್ ಇಲ್ಲದೆ ಕ್ಯಾನುಗಳಲ್ಲಿ ಇದನ್ನು ತಂದು ಜನಸಾಮಾನ್ಯರ ಮನೆಗಳಿಗೆ ಇಂತಹ ಹಾಲನ್ನು ವಿತರಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಹಾಲು ಪರೀಕ್ಷಾ ಕೇಂದ್ರಗಳನ್ನು(ಲ್ಯಾಬ್) ಸ್ಥಾಪಿಸಿ ಹಾಲನ್ನು ವಿತರಿಸುವವರು ಕಡ್ಡಾಯವಾಗಿ ಇಲ್ಲಿ ಪರೀಕ್ಷಿಸಿ ನಂತರ ವಿತರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಬೇಕು. ನಿರ್ಜನ ಪ್ರದೇಶದಲ್ಲಿ ಇದನ್ನು ತಯಾರಿಸುತ್ತಿದ್ದು, ಈ ಹಾಲನ್ನು ಸೇವಿಸಿದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜನರ ಜೀವದ ಜೊತೆ ಆಟವಾಡುತ್ತಿರುವ ಇಂತಹ ಅಪರಾಧಿಗಳನ್ನು ತಕ್ಷಣೆ ಪತ್ತೆ ಹಚ್ಚಿ ನಿಧಾ೯ಕ್ಷಿಣ್ಯ ಕ್ರಮ ಕೈಗೊಳ್ಳಲು ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.

