ತನಿಷ್ಕಾ ಆಭರಣ ಮಳಿಗೆಯಿಂದ ಆದರ್ಶ ಶಿಕ್ಷಕರಿಗೆ ಸನ್ಮಾನ | ಡಿಡಿಪಿಐ ನಾಗೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಒಬ್ಬ ಶಿಕ್ಷಕ ದೇಶದ ರಾಷ್ಟ್ರಪತಿ ಆಗಬಹುದು ಎಂಬುದನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಪಾತ್ರ ಶಿಕ್ಷಕರ ಮೇಲಿದೆ. ಶಿಕ್ಷಕರು ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಡಿಪಿಐ ಎಂ.ಎಚ್.ನಾಗೂರ ಹೇಳಿದರು.
ರವಿವಾರದಂದು ಟಾಟಾ ಸಮೂಹ ಸಂಸ್ಥೆಯ ಸಂತೋಷ ಸಮೂಹ ಸಂಸ್ಥೆ ಹಾಗೂ ತನಿಸ್ಕಾ ಆಭರಣ ಮಳಿಗೆಯ ವತಿಯಿಂದ ಹಮ್ಮಿಕೊಂಡಿದ್ದ “ಆದರ್ಶ ಶಿಕ್ಷಕರು”ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಶಿಕ್ಷಣ ಕೇವಲ ವ್ಯಕ್ತಿಯನ್ನು ಪರಿವರ್ತನೆ ಮಾಡುವುದು ಮಾತ್ರವಲ್ಲದೇ, ರಾಷ್ಟ್ರ ನಿರ್ಮಾಣದಲ್ಲಿಯೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಸಮಾಜದಲ್ಲಿ ಗುರುವಿನ ಬಗ್ಗೆ ಹೆಚ್ಚಿನ ಗೌರವವಿದೆ. ಗುರುವಿನ ಬೋಧನೆ, ಮೌಲ್ಯಗಳು, ಸಂಸ್ಕಾರ ಹಾಗೂ ಜೀವನ ಪದ್ಧತಿ ಅನೇಕ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ವಿದ್ಯಾರ್ಥಿಗಳು ಮತ್ತು ಸಮಾಜ ಶಿಕ್ಷಕರಿಗೆ ಗುರುವಿನ ಸ್ಥಾನ ನೀಡಿ, ಬಹಳಷ್ಟು ಗೌರವ ಹಾಗೂ ನಿರೀಕ್ಷೆ ಇಟ್ಟುಕೊಂಡಿದೆ. ಗುರುಗಳಿಗೆ ಗೌರವ ಕೊಡುವ ಹಾಗೂ ಗುರು ಪರಂಪರೆ ಹೊಂದಿರುವ ಜಿಲ್ಲೆ ನಮ್ಮದು ಎಂದರು.
ಈ ವೇಳೆಯಲ್ಲಿ ತಹಶೀಲ್ದಾರ ಪ್ರಶಾಂತ ಚನ್ನಗೊಂಡರವರು ಮಾತನಾಡುತ್ತ. ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದು. ಶಿಕ್ಷಕರುಗಳಿಗೆ ವಿಶೇಷ ಸ್ಥಾನ-ಮಾನಗಳಿದ್ದು, ಶಿಕ್ಷಕರ ಆದರ್ಶ ಗುಣಗಳಿಂದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ನಗರದ ೨೦ ಶಾಲೆಗಳ ಆದರ್ಶ ಶಿಕ್ಷಕರುಗಳಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ವೇಳೆಯಲ್ಲಿ ಗ್ರಾಹಕ ಸಂಪರ್ಕ ಅಧಿಕಾರಿ ಅರುಣ ದ್ವಾರಕನಾಥ, ವಕೀಲರಾದ ಎಸ್.ಎಸ್.ಬಿಳೂರ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ, ಶಿಕ್ಷಕರು ಉಪಸ್ಥಿತರಿದ್ದರು.

