ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾನವ ಸರಪಳಿಯಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಮಾನವ ಸರಪಳಿ ಕಾರ್ಯಕ್ರಮಕ್ಕಾಗಿ ನೂಡಲ್, ಸೆಕ್ಟರ್ ಹಾಗೂ ರೂಟ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ನೇಮಿತ ಅಧಿಕಾರಿಗಳು ತಮ್ಮ ಬಾಗಗಳಲ್ಲಿ ಮಾನವ ಸರಪಳಿ ನಿರ್ಮಿಸುವಲ್ಲಿ ಶ್ರಮಿಸಿದ್ದರು. ಅಲ್ಲಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ತಮ್ಮ ವಿದ್ಯಾರ್ಥಿಗಳೊಂದಿಗೆ ಭಾಗಿಯಾಗಿದ್ದರು. ಪೊಲೀಸರು ಬಿಗಿ ಬಂದೋಬಸ್ತ ವಹಿಸಿದ್ದರು.
ಮಾನವ ಸರಪಳಿ ನಿರ್ಮಿಸಲು ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿತ್ತು. ಪಟ್ಟಣದಲ್ಲಿ ಕೆಲ ಶಾಲೆಗಳ ವಿದ್ಯಾರ್ಥಿಗಳು ೭:೩೦ ಕ್ಕೆ ಆಗಮಿಸಿದ್ದರು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಉಪಹಾರ ವ್ಯವಸ್ಥೆ ಇಲ್ಲದೇ ಗೋಳಾಡಿದ ಪ್ರಸಂಗಗಳು ಕಂಡು ಬಂದವು. ಅಲ್ಲಲ್ಲಿ ವಿದ್ಯಾರ್ಥಿಗಳು ತಲೆತಿರುಗಿ ಬಿದ್ದರೆ ಆಸ್ಪತ್ರಗೆ ಹೊತ್ತೊಯ್ಯಲು ವಾಹನಗಳಿಲ್ಲದೇ ಪರದಾಡಿದರು. ಶಾಲಾ ಶಿಕ್ಷಕರು ಬೈಕ್ ಮೂಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದರು. ಇಲ್ಲಿನ ಅಧಿಕಾರಿಗಳು ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೇ ವಿದ್ಯಾರ್ಥಿಗಳಿಗೆ ತೊಂದರೆಯುಂಟು ಮಾಡಿದ್ದು ಮುಂದೆ ಹೀಗಾಗದ ರೀತಿಯಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕು ಎಂಬ ಕೂಗು ಶಿಕ್ಷಕರ ವಲಯದಲ್ಲಿ ಕೇಳಿ ಬಂತು.

