ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಗೇಟ್ ಬಳಿ ನಿರ್ಮಿಸಲಾದ ರೋಡ್ ಬ್ರೇಕರ್‌ಗಳು ಅವೈಜ್ಞಾನಿಕವಾಗಿವೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ನಂದಿಕೇಶ್ವಮಠ ಮನವಿ ಮಾಕೊಂಡಿದ್ದಾರೆ.
ಈ ಕುರಿತು ’ಉದಯರಶ್ಮಿ’ ಯೊಂದಿಗೆ ಮಾತನಾಡಿದ ಅವರು ಈ ಪ್ರದೇಶ ಅಪಘಾತ ವಲಯವಾಗಿದ್ದು ರೋಡ್ ಬ್ರೇಕರ್ ಅಳವಡಿಸಲು ಹಲವು ಬಾರಿ ಹೋರಾಟ ಮಾಡಿದ್ದೇವೆ. ಸಧ್ಯಕ್ಕೇನೋ ರೋಡ್‌ಬ್ರೇಕರ್ ಅಳವಡಿಸಲಾಗಿದೆ ಆದರೆ ಈ ಬ್ರೇಕರ್ ಗಳು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇವುಗಳ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬ್ರೇಕರ್‌ಗಳು ಪಾದಾಚಾರಿಗಳು ರಸ್ತೆ ದಾಟಲು ಅನುಕೂಲವಾಗಿಲ್ಲ. ಬದಲಾಗಿ ಇನ್ನಷ್ಟು ಸಮಸ್ಯೆ ತಂದೊಡ್ಡಿವೆ. ಕಾರಣ ಕೂಡಲೇ ಈ ಬ್ರೇಕರ್‌ಗಳನ್ನು ತೆರವುಗೊಳಿಸಿ ಇನ್ನಷ್ಟು ಮುಂಭಾಗದಲ್ಲಿ ಹಾಕಬೇಕು. ಇಲ್ಲವೇ ರಸ್ತೆಯ ಎರಡೂ ಬದಿಗಳಲ್ಲಿ ಹೊಸ ಬ್ರೇಕರ್‌ಗಳನ್ನು ಅಳವಡಿಸಿ ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಹೋರಾಟಗಾರರಾದ ನಾಗೇಂದ್ರ ಶಿವಶಿಂಪಿ ಮತ್ತು ರಫೀಕ ಬೀಳಗಿ ಮಾತನಾಡಿ ಈ ಬ್ರೇಕರ್‌ಗಳನ್ನು ಅಳವಡಿಸುವಾಗ ಅಧಿಕಾರಿಗಳು ಯಾವುದೇ ಮುಂದಾಲೋಚನೆ ಮಾಡದ ಕಾರಣ ಈ ಬ್ರೇಕರ್‌ಗಳು ಉಪಯೋಗಕ್ಕೆ ಬಾರದಂತಾಗಿವೆ. ಪಾದಾಚಾರಿಗಳು ರಸ್ತೆ ದಾಟಬೇಕಾದರೆ ವಾಹನಗಳ ವೇಗ ಕಡಿಮೆಯಾಗಬೇಕು ಆದರೆ ಇಲ್ಲಿ ಬ್ರೇಕರ್‌ಗಳನ್ನು ಬಹಳ ದೂರ ಅಳವಡಿಸಿರುವದರಿಂದ ವಾಹನಗಳ ವೇಗ ಕಡಿಮೆಯಾಗದೇ ಇನ್ನಷ್ಟು ಜಾಸ್ತಿಯಾಗುತ್ತಿದೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

