ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಇರುವ ಒಟ್ಟು ೧೦ ಸಕ್ಕರೆ ಕಾರ್ಖಾನೆಗಳಿಂದ ಮಾಲಿನ್ಯ ನಿಯಂತ್ರಣ ಕಾಯದೆಗಳನ್ನು ಗಾಳಿಗೆ ತೂರಿ ನೀರು ತ್ಯಾಜ್ಯವನ್ನು ಸಮೀಪದಲ್ಲಿಯ ಜಲಮೂಲಗಳಾದ ನದಿ, ಹಳ್ಳ, ಕೆರೆಗಳಿಗೆ ಯಾವುದೇ ಮುನ್ನೆಚರಿಕಾ ಕ್ರಮ ಕೈಗೊಳ್ಳದೇ ಹರಿಬಿಟ್ಟ ಕಾರಣದಿಂದಾಗಿ ನೀರು ವಿಷಯುಕ್ತವಾಗಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತಿದ್ದು, ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಅಂತಹ ಕಾರ್ಖಾನೆಯನ್ನು ಈ ವರ್ಷ ಪ್ರಾರಂಭಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಾಲಿನ್ಯ ನಿಯಂತ್ರಣ ಅಧಿಕಾರಿ ಎಂ.ಎ.ಮಣಿಯಾರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕಳೆದ ವರ್ಷ ಯರಗಲ್ ಬಾಲಾಜಿ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯವನ್ನು ನದಿಗೆ ಹರೆಸಿ ಕಾರ್ಖಾನೆಯವರೆ ಡಂಗುರ ಸಾರಿ ನದಿ ನೀರನ್ನು ಯಾರು ಬಳಸಬೇಡಿ, ಅದರಲ್ಲಿ ಕಾರ್ಖಾನೆಯ ತ್ಯಾಜ್ಯ(ವಿಷ) ಬಿಟ್ಟಿರುವುದಾಗಿ ಪತ್ರಿಕೆಗೆಗೂ ಹೇಳಿದ್ದಾರೆ, ಅಷ್ಟರಲ್ಲಿಯೇ ನದಿಯಲ್ಲಿಯ ಲಕ್ಷಾಂತರ ಮೀನುಗಳ ಮಾರಣ ಹೋಮ ಆಗಿರುವುದು ಇಡೀ ಮಾನವ ಕುಲವೇ ಚಿಂತಿಸುವಂತೆ ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈ ರೀತಿಯ ಮಾಲಿನ್ಯ ತಡೆಯಬೇಕಿರುವ ಅಧಿಕಾರಿಗಳು ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿ ಎದ್ದು ತೊರುತಿದೆ ಎಂದರಲ್ಲದೆ, ಒಂದು ವೇಳೆ ಅನುಮತಿ ಕೊಟ್ಟಿದ್ದೆಯಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಜಯಸಿಂಗ ರಜಪುತ, ಆತ್ಮಾನಂದ ಭೈರೊಡಗಿ, ಅರವಿಂದ ರಜಪೂತ, ತಿಪ್ಪರಾಯ ಭೈರೊಡಗಿ, ಚನ್ನವೀರ ವಾಲಿ ಸೇರಿದಂತೆ ಇತರರು ಇದ್ದರು.

