ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕ್ಯಾಂಟರ್ ಗೂಡ್ಸ್ ಮತ್ತು ಟಂ,ಟಂ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಟಂ,ಟಂ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕವಡಿಮಟ್ಟಿ-ಹಿರೇಮುರಾಳ ಗ್ರಾಮಗಳ ಮಧ್ಯೆ ಶನಿವಾರ ಮದ್ಯಾಹ್ನ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕರೆಪ್ಪ ನಾಲತವಾಡ(೪೮) ಎಂದು ಗುರುತಿಸಲಾಗಿದೆ. ಮೂಲತಃ ಚವನಭಾವಿ ಗ್ರಾಮದ ಕರೆಪ್ಪ ತಮ್ಮೂರಲ್ಲಿ ಕಿರಾಣಿ ಅಂಗಡಿಯೊಂದರ ಮಾಲೀಕನಾಗಿದ್ದ. ತನ್ನ ಅಂಗಡಿಗೆ ಸರಕು ತರಲು ಪಟ್ಟಣಕ್ಕೆ ಅಟೋ ಮೂಲಕ ಬಂದಿದ್ದು, ಎಲ್ಲ ಸರಕನ್ನು ಖರೀದಿಸಿ ಮರಳುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಚವನಭಾವಿ ಗ್ರಾಮದ ಆಟೋ ಚಾಲಕ ಯಮನಪ್ಪ ಜಗಂಡಬಾವಿ ಈತನಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೃತನಿಗೆ ಪತ್ನಿ, ಪುತ್ರಿ, ಈರ್ವರು ಪುತ್ರರು ಇದ್ದು ಮನೆಯ ಒಡೆಯನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.
ಎಫ್‌ಐಆರ್ ದಾಖಲು :
ಕ್ಯಾಂಟರ್ ವಾಹನ ಚಾಲಕ ವಾಹನವನ್ನು ನಾತವಾಡ ಕಡೆಯಿಂದ ಅತೀ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಟಂ,ಟಂ ಗೆ ಹಾಯಿಸಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಮೃತನಿಗೆ ಭಾರಿ ಗಾಯ ಪೆಟ್ಟು ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ್ದು ಅಲ್ಲದೇ ಟಂ,ಟಂ ಚಾಲಕನಿಗೆ ಭಾರಿ ಗಾಯ ಪೆಟ್ಟು ಪಡಿಸಿರುತ್ತಾನೆ. ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಪತ್ನಿ ಮುದ್ದವ್ವ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
