ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾರ್ವಜನಿಕರಲ್ಲಿ ಸ್ವಚ್ಛತೆಯ ಪಾಲುದಾರಿಕೆ ಅರಿವು ಮೂಡಿಸುವ ಅಂಗವಾಗಿ ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಸ್ವಚ್ಛ ಭಾರತ ಮಿಷನ್ ಯೋಜನೆಯ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಡಿಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯ ನೆರವೇರಿಸಿ ಮಾತನಾಡಿದರು.
ಸ್ವಚ್ಛ ಭಾರತ ಮಿಷನ್ ನಿರ್ದೇಶನದಂತೆ ಪಟ್ಟಣದಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ಈಗಾಗಲೇ ಮನೆ ಮನೆ ಕಸ ಸಂಗ್ರಹಣೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಯುವಕ, ಸ್ತ್ರೀಶಕ್ತಿ ಸಂಘಗಳು ಕೈಜೋಡಿಸಬೇಕು ಎಂದರು.
ನಂತರ ಪೌರಕಾರ್ಮಿಕರೊಂದಿಗೆ ಸೇರಿ ಸ್ವಚ್ಛತಾ ಹೀ ಸೇವಾ ಎಂಬ ರಂಗೋಲಿ ಬಿಡಿಸಿ ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ಕನಸನ್ನು ಎಲ್ಲರೂ ಒಂದಾಗಿ ನನಸು ಮಾಡೋಣ ಎಂದು ಕರೆ ನೀಡಿದರು.
ಪಟ್ಟಣ ಪಂಚಾಯಿತಿಯ ೧೭ ಹಾಗೂ ೩ ನಾಮನಿರ್ದೇಶಿತ ಸದಸ್ಯರಲ್ಲಿ ಕೇವಲ ೮ನೇ ವಾರ್ಡಿನ ಕಾಶೀನಾಥ ಬಜಂತ್ರಿ ಹಾಗೂ ೧೨ನೇ ವಾರ್ಡಿನ ಸಿಂಧೂರ ಡಾಲೇರ ಮಾತ್ರ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಸಾರ್ವಜನಿಕರ ಗಮನಸೆಳೆದರು.
ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಮುತ್ತುರಾಜ್ ಹಿರೇಮಠ, ಪ್ರವೀಣ ಹಿರೇಮಠ, ಗುರುರಾಜ ಬಿರಾದಾರ, ಖಾಜೇಸಾಬ್ ವಾಲೀಕಾರ, ಚಂದ್ರಶೇಖರ ಬಾಗೇವಾಡಿ, ಪ್ರವೀಣ ಗುಡಿಮನಿ, ಮುಬಾರಕ್ ಪಡೇಕನೂರ, ರಿಯಾಜ್ ಬೇಪಾರಿ, ಮಾರ್ತಾಂಡ ಗುಡಿಮನಿ, ದೌಲಪ್ಪ ತಳಕೇರಿ, ರಫೀಕ್ ನದಾಫ್, ಆಸೀಫ್ ಹಚ್ಯಾಳ, ರೇಣುಕಾ ಬಿರಾದಾರ, ಶಿವಬಾಳವ್ವ ಗುಡಿಮನಿ, ಶಾಂತವ್ವ ಚಲವಾದಿ, ಶೋಭಾ ಶಿರಶ್ಯಾಡ, ಯಲ್ಲವ್ವ ಸರೂರ, ಶಾಂತಾಬಾಯಿ ತಳಕೇರಿ ಸೇರಿದಂತೆ ಇತರರು ಇದ್ದರು.

