ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪ್ರಜಾಪ್ರಭುತ್ವ ವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೆ.೧೫ರಂದು ಜಿಲ್ಲೆಯಾದ್ಯಂತ ವಿವಿಧ ಕ್ಷೇತ್ರದ ೨೮.೫೦ ಹೆಕ್ಟೇರ್ ಪ್ರದೇಶದಲ್ಲಿ ೩೦,೦೦೦ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಪ್ರಾದೇಶಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೆಡಲು ಜಿಲ್ಲೆಯ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಆಯಾ ಕ್ಷೇತ್ರಗಳಲ್ಲಿ ವಿವಿಧ ವರ್ಗಗಳ ಪ್ರತಿನಿಧಿಗಳಿಂದ ಉದ್ಘಾಟನೆಗೊಳಿಸಿ ಆಯಾ ಕ್ಷೇತ್ರಗಳಿಗೆ ಅರ್ಪಣೆ ಮಾಡಲಾಗುವುದು.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೧೦ ಹೆಕ್ಟೇರ್ ಪ್ರದೇಶದಲ್ಲಿ ೬೦೦೦ ಸಸಿಗಳನ್ನು ನಾಗರಿಕರಿಂದ ನೆಡುವ ಮೂಲಕ ನಾಗರಿಕರಿಗೆ ಈ ಕ್ಷೇತ್ರವನ್ನು ಅರ್ಪಣೆ ಮಾಡಲಾಗುವುದು.
ಚಡಚಣ ತಾಲೂಕಿನ ಬಳ್ಳೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೫ ಹೆಕ್ಟೇರ್ ಪ್ರದೇಶದಲ್ಲಿ ೨೫೦೦ ಸಸಿಗಳನ್ನು ಪತ್ರಿಕಾ ಮಾಧ್ಯಮದವರಿಂದ ನೆಡುವ ಮೂಲಕ ಪತ್ರಿಕಾ ಮಾಧ್ಯಮದವರಿಗೆ ಈ ಕ್ಷೇತ್ರವನ್ನು ಅರ್ಪಣೆ ಮಾಡಲಾಗುವುದು.
ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ೪ ಹೆಕ್ಟೇರ್ ಪ್ರದೇಶದಲ್ಲಿ ೩೨೦೦ ಸಸಿಗಳನ್ನು ಶಾಸಕರು ಹಾಗೂ ಅಧಿಕಾರಿಗಳಿಂದ ನೆಡುವ ಮೂಲಕ ಈ ಕ್ಷೇತ್ರವನ್ನು ಕಾರ್ಯಾಂಗಕ್ಕೆ ಕ್ಷೇತ್ರಕ್ಕೆ ಅರ್ಪಣೆ ಮಾಡಲಾಗುವುದು.
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೪.೫೦ ಹೆಕ್ಟೇರ್ ಪ್ರದೇಶದಲ್ಲಿ ೨೯೫೦ ಸಸಿಗಳನ್ನು ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರಿಂದ ನೆಡುವ ಮೂಲಕ ಈ ಕ್ಷೇತ್ರವನ್ನು ಶಾಸಕಾಂಗ ಕ್ಷೇತ್ರಕ್ಕೆ ಅರ್ಪಣೆ ಮಾಡಲಾಗುವುದು.
ಕೊಲ್ಹಾರ ತಾಲೂಕಿನ ಕೂಡಗಿ ಎನ್‌ಟಿಪಿಸಿ ಪ್ರದೇಶದ ೫ ಹೆಕ್ಟೇರ್ ಪ್ರದೇಶದಲ್ಲಿ ೧೫೩೫೦ ಸಸಿಗಳನ್ನು ನ್ಯಾಯಾಧೀಶರು ಮತ್ತು ವಕೀಲರಿಂದ ನೆಡುವ ಮೂಲಕ ಈ ಕ್ಷೇತ್ರವನ್ನು ನ್ಯಾಯಾಂಗ ಕ್ಷೇತ್ರಕ್ಕೆ ಅರ್ಪಣೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

