ಕೃಷಿ ಪಂಪಸೆಟ್ ಗೆ ಆಧಾರ ಜೋಡಣೆ & ಮೀಟರ್ ಅಳವಡಿಕೆ ಕೂಡಲೇ ಕೈ ಬಿಡಲು ಸಚಿವರಿಗೆ ಮನವಿ
ವಿಜಯಪುರ: ಕೃಷಿ ಪಂಪ್ ಸೆಟ್ ಗೆ ಆಧಾರ ಜೋಡಣೆ ಹಾಗೂ ಮೀಟರ್ ಅಳವಡಿಕೆ ಕೂಡಲೇ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿಜಯಪುರ ವತಿಯಿಂದ ಅಧೀಕ್ಷಕ ಅಭಿಯಂತರರು ಹೆಸ್ಕಾಂ (ವಿ) ವಿಜಯಪುರ ಇವರ ಮುಖಾಂತರ ರಾಜ್ಯದ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿ, ರೈತರ ಕಷ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಲ್ಲ, ಅವರ ಆಸಕ್ತಿಗಳೆಲ್ಲ ಕಾರ್ಪೋರೇಟ್ ಕಂಪನಿಗಳ ಪರ. ಈಗ ಸರ್ಕಾರ ಮತ್ತೆ ವಿದ್ಯುತ್ ಖಾಸಗಿಕರಣದ ಕಡಗೆ ಹೊರಟಿದೆ. ಖಾಸಗಿ ವ್ಯಕ್ತಿಗಳಿಗೆ ಈ ಕಂಪನಿ ವರ್ಗಾವಣೆಗೆ ಮುಂಚೆ ಆಧಾರ ಲಿಂಕ್ ಮಾಡಿ ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಸಂಚು ಇದಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ರವರು ಮಾತನಾಡಿ ಸರಕಾರ ವಿದ್ಯುತ್ ನಗರ, ಹಳ್ಳಿ ತಾರತಮ್ಯ ಇಲ್ಲದೆ ಸಮಾನ ವಿತರಣೆ ಬೇಕು. ಗುಣಮಟ್ಟವಿಲ್ಲದ ವಿದ್ಯುತ್ ಇದರಿಂದ ರಾಜ್ಯದ ೩೦ ಲಕ್ಷ ಪಂಪ್ಸೆಟ್ಗಳು ವರ್ಷದಲ್ಲಿ ಒಮ್ಮೆ ಸುಟ್ಟು ಭಸ್ಮವಾದರೆ ಅದರ ರಿವೈಡಿಂಗ್, ಈ ಮೋಟಾರ್ ಎತ್ತಲು ಇಳಿಸಲು ಅಂದಾಜು ೮೦೦೦ ರೂ.ಗಳಾಗುತ್ತದೆ. ಇದನ್ನು ಸರ್ಕಾರವೇ ಭರಿಸಬೇಕು. ಫಸಲು ನಷ್ಟ ಆಂದಾಜಿಸಿ, ದರ ನಿಗದಿ ಮಾಡಬೇಕು. ಕೃಷಿಗೆ ಸಂಬಂಧಪಟ್ಟ ವಿದ್ಯುತ್ ಪರಿವರ್ತಕಗಳು ಸುಟ್ಟರೆ ೨೪ ಘಂಟೆಯೊಳಗಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿ ಅದರ ಸಾರಿಗೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ೫ ಜಿಲ್ಲೆಯಲ್ಲಿ ರೈತರ ಜಮೀನುಗಳಲ್ಲಿ ಹಾಗೂ ರೈತರ ಮನೆಗಳ ತಂತಿಗಳನ್ನು ಮೇಲೆ ಜೋತು ಬಿದ್ದ ವಿದ್ಯುತ್ ಕೂಡಲೇ ಸರಿಪಡಿಸಬೇಕು. ಜಿಲ್ಲೆಯಲ್ಲಿ ಸುಮಾರು ದೊಡ್ಡಿ, ತಾಂಡ, ಹಟ್ಟಿ ಮತ್ತು ಕ್ಯಾಂಪ್ ಗಳಿಗೆ ವಿದ್ಯುತ್ ಸಂಪರ್ಕವಿಲ್ಲ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಪಡಿಸಿದರು.
ಈ ಸಮಯದಲ್ಲಿ ಮಲ್ಲಿಕಾರ್ಜುನ ಹಾವಿನಾಳಮಠ, ರಮೇಶ ಕುಂಬಾರ, ಶರಣು ಬಿಸನಾಳ, ಗಣಪತಿ ಹೂಗಾರ, ಸುರೇಶ ಡೊಂಗರಾಜ್, ಸುರೇಶ ಬಿರಾದಾರ, ಫಯಾಜ ಬಾಗವಾನ, ಜಗದೇವ ರಾಠೋಡ, ಶ್ರೀಮಂತ ತೇಲಿ, ಸಂಗಪ್ಪ ತೇಲಿ, ಸರ್ದಾರ ಡೊಳ್ಳಿ, ಭೀಮರಾಯ ಭಂಟನೂರ, ಸಾಹೇಬಗೌಡ ಬಿರಾದಾರ, ಪರಶುರಾಮ ಹಿರೇಕುರುಬರ, ರಾಜು ಅಂಗಡಿ, ಸಂಜೀವಕುಮಾರ ಜವಳಗಿ, ರಾಯಗೊಂಡ ತಳವಾರ, ನರಸುಗೌಡ ಪಾಟೀಲ, ಮಹೇಶ ಪಾಟೀಲ, ರಾಜಶೇಖರ ಕುಂಬಾರ, ಇನ್ನಿತರರು ಉಪಸ್ಥಿತರಿದ್ದರು.

