ಸಿಂದಗಿ: ಪ್ರತಿಯೊಬ್ಬ ನಾಗರಿಕರಿಗೂ ಎಚ್‌ಐವಿ ಸೋಂಕಿನ ಕುರಿತಾಗಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಐಸಿಟಿಸಿ ಆಪ್ತ ಸಮಾಲೋಚಕ ಎಂ.ಪಿ.ಸಾಗರ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೇತ್ರದಾನ ಹಾಗೂ ಹೆಚ್‌ಐವಿ ಕುರಿತಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು ಎಂದರೆ ಅದು ಎಚ್‌ಐವಿ. ಈ ಸೋಂಕನ್ನು ತಡೆಗಟ್ಟಲು ಸರಕಾರ ಹಲವಾರು ಯೋಜನೆ ಹಾಕಿಕೊಂಡಿದೆ. ಅದರಲ್ಲಿ ಎಚ್‌ಐವಿ ಸೋಂಕಿನ ಜಾಗೃತಿ ಕಾರ್ಯಕ್ರಮವು ಒಂದಾಗಿದೆ. ರೋಗವನ್ನು ಮರೆಯಬೇಕೆ ವಿನಃ ರೋಗಿಯನಲ್ಲ. ಸಮಾಜದಲ್ಲಿ ಇತರರಂತೆಯೇ ಎಚ್‌ಐವಿ ಸೋಂಕಿತರನ್ನು ಕಾಣಬೇಕು. ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಎಚ್‌ಐವಿ, ಟಿಬಿ ಸೇರಿದಂತೆ ವಿವಿಧ ಕಾಯಿಲೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ವೇಳೆ ಡಾ.ವಿಜಯಮಹಾಂತೇಶ ಹಾಗೂ ನೇತ್ರಾಧಿಕಾರಿ ರಾಜಶೇಖರ ನರಗೋದಿ ಮಾತನಾಡಿ, ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ಈ ನೇತ್ರದಾನವೂ ಒಂದು. ಹುಟ್ಟಿನಿಂದಲೋ, ಅಪಘಾತದಿಂದಲೋ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ ಸತ್ತ ನಂತರ ಮನುಷ್ಯ ಮಾಡುವ ನೇತ್ರದಾನ ದೃಷ್ಟಿಯ ಭಾಗ್ಯ ಒದಗಿಸುತ್ತದೆ. ನೇತ್ರದಾನ ಬಹಳ ಪವಿತ್ರವಾದ ದಾನ. ನಾವು ಸತ್ತ ಬಳಿಕವೂ ಜಗತ್ತನ್ನು ಆನಂದಿಸಬೇಕಿದ್ದಲ್ಲಿ ನಮ್ಮ ಕಣ್ಣುಗಳನ್ನು ಇನ್ನೊಬ್ಬರಿಗೆ ನಮ್ಮ ಮರಣಾನಂತರ ದಾನ ಮಾಡಬೇಕು. ನಮ್ಮ ಕಣ್ಣುಗಳ ಮೂಲಕ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ದೊರೆಯುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರೆಯುವುದಿಲ್ಲ. ಸ್ವಯಂ ಪ್ರೇರಿತವಾಗಿ ನೇತ್ರದಾನ ಮಾಡಬೇಕು. ನೇತ್ರದಾನದ ಬಗ್ಗೆ ಮೂಢನಂಬಿಕೆ ಇರಬಾರದು. ಮರಣ ಹೊಂದಿದ ವ್ಯಕ್ತಿಯ ನೇತ್ರಗಳು ೬-೮ಗಂಟೆಗಳ ಕಾಲ ಜೀವಂತವಾಗಿರುತ್ತವೆ. ನೇತ್ರ ಬ್ಯಾಂಕ್‌ದವರು ಬಂದು ೧೦-೧೫ನಿಮಿಷದಲ್ಲಿ ನಮ್ಮ ಕಣ್ಣಿನ ಕಾರನಿಯಾ ತೆಗೆದುಕೊಂಡು ಹೋಗಿ ಅದರ ಅವಶ್ಯಕತೆ ಇದ್ದವರಿಗೆ ಕಣ್ಣುಗಳನ್ನು ಅಳವಡಿಸುತ್ತಾರೆ. ಚಿತ್ರರಂಗದ ಪುನೀತರಾಜಕುಮಾರ ಸೇರಿದಂತೆ ಸಮಾಜದ ಅನೇಕ ಗಣ್ಯ ವ್ಯಕ್ತಿಗಳು ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ನಾವು ಸಹ ನೇತ್ರದಾನ ಮಾಡೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ತಜ್ಞ ವೈದ್ಯಾಧಿಕಾರಿಗಳು, ವೈದ್ಯರು, ಆಸ್ಪತ್ರೆಯ ಎಲ್ಲಾ ಕೇಡರ ಮತ್ತು ಕಾರ್ಯಾಲಯ ಸಿಬ್ಬಂದಿಗಳು ಸೇರಿದಂತೆ ತಾಲೂಕಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

