ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಚಿವ ಶಿವಾನಂದ ಎಸ್.ಪಾಟೀಲ ಮಾಹಿತಿ
ವಿಜಯಪುರ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ೨೦.೨೨ ಕೋಟಿ ರೂ. ನಿವ್ವಳ ಲಾಭ ಗಳಿಸುವ ಮೂಲಕ ಶೇ.೪೧.೪೦ ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಧನೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ತಿಳಿಸಿದರು.
ಶನಿವಾರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ೧೯೧೯ರಲ್ಲಿ ಸ್ಥಾಪಿತವಾದ ಬ್ಯಾಂಕು ಈಗ ೧೦೫ ವರ್ಷಗಳ ನಿರಂತರ ಸಮರ್ಪಕ ಸೇವೆ ಪೂರ್ಣಗೊಳಿಸಿ ೧೦೬ನೇ ವರ್ಷದಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಾಧನೆ ಮಾಡಿ ಬ್ಯಾಂಕಿನ ಸಾಂಪತ್ತಿಕ ಸ್ಥಿತಿಯು ಸದೃಢಗೊಂಡಿದೆ. ೨೦೨೩-೨೪ನೇ ಸಾಲಿನಲ್ಲಿ ತೆರಿಗೆ ಪೂರ್ವ ರೂ.೨೭.೧೦ ಕೋಟಿ ಲಾಭಗಳಿಸಿದ್ದು, ನಿಯಮಾನುಸಾರ ೬.೮೮ ಕೋಟಿ ರೂ. ತೆರಿಗೆ ಪಾವತಿಸಿ ನಂತರ ೨೦.೨೨ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಗಳಿಸಿದ ಗರಿಷ್ಠ ವಾರ್ಷಿಕ ನಿವ್ವಳ ಲಾಭವಾಗಿದ್ದು, ದಾಖಲಾರ್ಹ ಸಾಧನೆಯಾಗಿದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೃಷಿಗೆ ಮೊದಲು ಆದ್ಯತೆ ನಿಡಿ, ವಿವಿಧ ಕೃಷಿಯೇತರ ಉದ್ದೇಶಗಳಿಗಾಗಿ ಸಾಲ ನೀಡುತ್ತಿದೆ. ಸನ್ ೨೦೨೩-೨೪ನೇ ಸಾಲಿನಲ್ಲಿ ಕೃಷಿಗಾಗಿ ೧೭೧೯.೦೭ ಕೋಟಿ ರೂ. ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ೧೧೧೬.೦೩ ಕೋಟಿ ರೂ. ಒಟ್ಟು ೨೮೩೫.೧೦ ಕೋಟಿ ರೂ. ಸಾಲ ವಿತರಿಸಲಾಗಿದೆ. ಒಟ್ಟು ೨೭ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗಾಗಿ ಯೋಜನಾ ವೆಚ್ಚ ಮತ್ತು ಸಮರ್ಪಕ ನಿರ್ವಹಣೆಗಾಗಿ ಅವಧಿ ಸಾಲ ಹಾಗೂ ದುಡಿಯುವ ಬಂಡವಾಳ ಸಾಲಗಳನ್ನು ನೀಡಿದ್ದು, ವರ್ಷಾಂತ್ಯಕ್ಕೆ ೨೧ ಸಕ್ಕರೆ ಕಾರ್ಖಾನೆಗಳಿಂದ ಒಟ್ಟು ೭೪೭.೯೦ ಕೋಟಿ. ರೂ. ಬರತಕ್ಕ ಸಾಲ ಬಾಕಿ ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿಯ ಫ್ಯಾಕ್ಸುಗಳು ಹಾಗೂ ಬ್ಯಾಂಕಿನ ಶಾಖೆಗಳಿಂದ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಯಡಿ ಒಟ್ಟು ೨.೪೩ ಲಕ್ಷ ರೈತರಿಗೆ ರೂ.೧೬೯೯.೪೩ ಕೋಟಿ ಬೆಳೆ ಸಾಲ ಹಾಗೂ ರೂ.೧೬೫.೧೦ ಕೊಟಿ ಮಧ್ಯಮಾವಧಿ-ದೀರ್ಘಾವಧಿ ಕೃಷಿ ಸಾಲ ಒಟ್ಟಾರೆ ರೂ.೧೮೬೫.೨೫ ಕೋಟಿ ಸಾಲ ನೀಡಿದೆ. ೧೮೫೧೩ ಹೊಸ ರೈತರಿಗೆ ರೂ.೧೪೫.೦೨ ಕೋಟಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ೪೬ ಶಾಖೆಗಳನ್ನು ಹೊಂದಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ೫ ಹೊಸ ಶಾಖೆಗಳನ್ನು ಆರಂಭಿಸಲು ಆರ್.ಬಿ.ಆಯ್.ದಿಮದ ಅನುಮತಿ ಪಡೆದಿದೆ. ಈಗಾಗಲೇ ಶಿವಣಗಿಯಲ್ಲಿ ನೂತನ ಶಾಖೆಯನ್ನು ಆರಂಭಿಸಿದ್ದು, ಗೊಳಸಂಗಿ, ಲಚ್ಯಾಣ, ಜಿಗಜಿವಣಗಿ ಹಾಗೂ ಹಿಟ್ಟಿನಹಳ್ಳಿ ಗ್ರಾಮಗಳಲ್ಲಿ ನೂತನ ಶಾಖೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರುಗಳಾದ ಸುರೇಶ ಬಿರಾದಾರ, ಶೇಖರ ದಳವಾಯಿ, ಬಿ.ಎಸ್.ಪಾಟೀಲ ಯಾಳಗಿ, ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಕಲ್ಲನಗೌಡ ಬಿ.ಪಾಟೀಲ, ಹಣಮಂತ್ರಾಯಗೌಡ ಆರ್.ಪಾಟೀಲ, ಗುರುಶಾಂತ ನಿಡೋಣಿ, ಅರವಿಂದ ಪೂಜಾರಿ, ವೃತ್ತಿಪರ ನಿರ್ದೇಶಕರಾದ ಎಸ್.ಎಸ್.ಶಿಂಧೆ, ಎಸ್.ಎಸ್.ಜಾಗೀರದಾರ, ಆಡಳಿತ ಮಂಡಳಿ ಸಲಹೆಗಾರ ಎ.ಕೊಟ್ರೇರ್ಶ, ಮುಖ್ಯ ಕಾರ್ಯನಿರ್ವಾಹಕ ಎಸ್.ಬಿ.ಬಿರಾದಾರ, ಉಪನಿಬಂಧಕರಾದ ಎಸ್.ಕೆ.ಭಾಗ್ಯಶ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.

