ಇಂಡಿ: ರಾಘವೇಂದ್ರ ಖಾಸನೀಸರು ಕನ್ನಡ ಕಥಾ ಜಗತ್ತಿನಲ್ಲಿ ಕನ್ನಡ ಕಥನ ಮಾರ್ಗದ ಹೊಸಪರಂಪರೆಯನ್ನು ಹುಲುಸಾಗಿ ಬೆಳೆಸಿದವರು, ಅವರನ್ನು ಗುರುತಿಸವ ಕಾರ್ಯ ಅಷ್ಟಾಗಿ ನಡೆಯದಿರುವುದು ವಿಷಾಧನೀಯ ಎಂದು ಹಿರಿಯ ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಕಥನ ಮಾರ್ಗ-ರಾಘವೇಂದ್ರ ಖಾಸನೀಸರ ಕತೆಗಳು’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಇಂಡಿ ನೆಲವು ಮಧುರಚೆನ್ನರ, ಕಾಪಸೆ ರೇವಪ್ಪನವರ, ಪಿ.ಧೂಲಾಸಾಹೇಬರ, ಸಿಂಪಿಲಿಂಗಣ್ಣನವರ ಹಲಸಂಗಿ ಗೆಳೆಯರ ಬಳಗದ ಕಾರ್ಯವನ್ನು ಈಗೀಗ ಸ್ಮರಿಸುತ್ತಿದ್ದೇವೆ, ಅಂತವರಲ್ಲಿ ಕತೆಗಾರ ರಾಘವೇಂದ್ರ ಖಾಸನೀಸರು ಹಾಗೂ ಶ್ರೀರಂಗರು ಸ್ಮರಣೆಯಲ್ಲಿ ಉಳಿಯದಿರುವುದು ಹಾಗೂ ಅವರ ಕತೆಗಳ ಕುರಿತು ಇಲ್ಲಿನವರಿಗೂ ತಿಳಿಯುವಲ್ಲಿ ಹಿಂದೆ ಉಳಿದ್ದಿದ್ದೇವೆ ಎಂದರು.
ವಿಮರ್ಶಕ ಮನು ಪತ್ತಾರ ರಾಘವೇಂದ್ರ ಖಾಸನೀಸರ ಕತೆಗಳು ಕುರಿತಾಗಿ ಉಪನ್ಯಾಸ ಮಂಡಿಸಿ ಹೊಸ ತಲೆಮಾರಿನ ಕತೆಗಾರರು ಖಾಸನೀರ ಕತೆಗಳ ಕುರಿತು ಓದಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರಚಾರ್ಯ ಡಾ. ರಮೇಶ ಆರ್.ಎಚ್. ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು.
ವೇದಿಕೆಯಲ್ಲಿ ಓದುಗರ ಚಾವಡಿಯ ಅಧ್ಯಕ್ಷ ಶರಣು ಸಬರದ, ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಮೊದಲಾದವರು ಉಪಸ್ಥಿತರಿದ್ದರು.
ಸಿಂಡಿಕೇಟ್ ಸದಸ್ಯರ ಸನ್ಮಾನ: ಇದೇ ಸಮಾರಂಭದಲ್ಲಿ ನೂತನವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಡಾ. ಎಸ್.ಜೆ.ಮಾಡ್ಯಾಳ ಅವರನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಹಾಗೂ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದವತಿಯಿಂದ ಅಭಿನಂದನಾ ಕಾರ್ಯಕ್ರಮ ಎರ್ಪಡಿಸಿ ಗೌರವ ಸನ್ಮಾನವನ್ನು ಮಾಡಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಕತ್ತಿ ಸ್ವಾಗತಿಸಿದರು. ಕು.ಪೂಜಾ ಸಾರವಾಡ ಪ್ರಾರ್ಥಿಸಿದರು. ಪ್ರೊ. ಕಾಶೀನಾಥ ಜಾಧವ ವಂದಿಸಿದರು. ಪ್ರೊ.ಕವೀಂದ್ರಕುಮಾರ ಚಾಬಕಸವಾರ ನಿರೂಪಿಸಿದರು.

