ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತೀವ್ರ ಆಕ್ರೋಶ!
ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ ‘ಹರಿಶ್ಚಂದ್ರ’ ಅಲ್ಲ, ಒಬ್ಬ ಶೆಡ್ ಗಿರಾಕಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ. ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಕಿಡಿಕಾರಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, `ರಾಹುಲ್ ಖರ್ಗೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಎಂಜಿನಿಯರಿಂಗ್ ಪದವೀಧರರು. ಡಿಆರ್ ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥಹ ಅರ್ಹರಿಗೆ ಸಿ.ಎ. ನಿವೇಶನ ಕೊಡದೆ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ಛಲವಾದಿ ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಖರ್ಗೆ ಕುಟುಂಬದ ವಿರುದ್ಧ ವಿನಾಕಾರಣ ಆರೋಪ
ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಎಂಬಿ ಪಾಟೀಲ್, ‘ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇ. 5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ. ನಾರಾಯಣಸ್ವಾಮಿ 2006ರಲ್ಲಿಬೃಂದಾವನ್ ಸಾಫ್ಟ್ವೇರ್’ ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರ್ಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಸಚಿವ ಎಂಬಿ ಪಾಟೀಲ್ ವ್ಯಂಗ್ಯವಾಡಿದರು.

