ಬಸವನಬಾಗೇವಾಡಿ: ಕೃಷಿ ಮೇಳಗಳು ರೈತ ಬಾಂಧವರ ಜೀವನದಲ್ಲಿ ಬದಲಾವಣೆ ಮಾಡಲು ಪೂರಕವಾಗಿವೆ. ರೈತ ಬಾಂಧವರು ಕೃಷಿ ಮೇಳದ ಸದುಪಯೋಗ ಪಡೆದುಕೊಂಡು ವೈಜ್ಞಾನಿಕ ಚಿಂತನೆ ಮಾಡಿ ಕೃಷಿ ಮಾಡಿದರೆ ಲಾಭ ಪಡೆಯಬಹುದು ಎಂದು ಸಕ್ಕರೆ, ಕೃಷಿ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜಾತ್ರೆಯ ನಾಲ್ಕನೇ ದಿನ ಗುರುವಾರ ದೇವಸ್ಥಾನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ, ರಾಷ್ಟ್ರೀಯ ಬಸವಸೈನ್ಯ ಸಂಘಟನೆ ಹಮ್ಮಿಕೊಂಡಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು. ರೈತರ ಪರಿಶ್ರಮಕ್ಕೆ ಬೆಲೆ ಕಟ್ಟುವ ಯಾವ ಸರ್ಕಾರವೂ ಇದುವರೆಗೂ ಬಂದಿಲ್ಲ. ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತಹ ಪ್ರಧಾನಿ ದೇಶಕ್ಕೆ ಇದುವರೆಗೂ ಸಿಗದೇ ಇರುವದು ರ್ದೌಭಾಗ್ಯ. ರೈತರ ಪರಿಶ್ರಮಕ್ಕೆ ಬೆಲೆ ಸಿಗಬೇಕಾದರೆ ಲಾಭದಾಯಕ ಬೆಳೆಗಳನ್ನು ಬೆಳೆಯುವಂತಾಗಬೇಕು. ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ನಷ್ಟವಾಗದಂತೆ ನೋಡಿಕೊಳ್ಳಬೇಕೆಂದರು.
ಉತ್ತರಪ್ರದೇಶ, ಆಂದ್ರಪ್ರದೇಶ, ಕರ್ನಾಟಕ ರಾಜ್ಯದಲ್ಲಿ ೧ ಲಕ್ಷ ೬ ಸಾವಿರ ಕೋಟಿ ಹೆಕ್ಟೇರ್ ಕಬ್ಬು ಅನ್ನು ಈ ವರ್ಷ ಬೆಳೆಯಲಾಗಿದೆ. ವಿಜಯಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಯಲ್ಲಿ ಶೇ. ೭೦ ರಷ್ಟು ಹೆಚ್ಚು ರೈತರು ಕಬ್ಬು ಬೆಳೆಯುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿಯೇ ಕಳೆದ ವರ್ಷ ೭೬ ಸಕ್ಕರೆ ಕಾರ್ಖಾನೆಗಳು ಕಬ್ಬು ನೂರಿಸಿವೆ. ಈ ವರ್ಷ ೮೭ ಕಾರ್ಖಾನೆಗಳು ಕಬ್ಬು ನೂರಿಸುತ್ತಿವೆ. ಕಬ್ಬು ಬೆಳೆಯಿಂದ ಶೇ. ೯೯ ರಷ್ಟು ಒಂದಿಲ್ಲೊಂದು ರೀತಿಯಲ್ಲಿ ಉಪಯೋಗವಿದೆ. ರೈತರು ಕಬ್ಬಿಗೆ ವಿಶೇಷ ಆದ್ಯತೆ ನೀಡಿ ವೈಜ್ಞಾನಿಕವಾಗಿ ಬೆಳೆದು ಉತ್ತಮ ಇಳುವರಿ ಪಡೆಯಬೇಕು. ಜಿಲ್ಲೆಯಲ್ಲಿ ತೊಗರಿ ಸಹ ಹೆಚ್ಚು ಬೆಳೆಯಲಾಗುತ್ತಿದೆ. ಮೆಕ್ಕೆಜೋಳಕ್ಕೆ ಬೆಳೆ ಇದುವರೆಗೂ ಇದೆ. ಮುಂದಿನ ೩-೪ ವರ್ಷದಲ್ಲಿ ಇದಕ್ಕೆ ಹೆಚ್ಚು ಮೌಲ್ಯ ಬರಲಿದೆ. ಈ ನಿಟ್ಟಿನಲ್ಲಿ ರೈತರು ಮೆಕ್ಕೆಜೋಳವನ್ನು ಬೆಳೆಯುವ ಕಡೆಗೆ ಗಮನ ಹರಿಸುವದು ಅಗತ್ಯವಿದೆ. ಜಾತ್ರಾಮಹೋತ್ಸವದಂಗವಾಗಿ ಜಾತ್ರಾ ಉತ್ಸವ ಸಮಿತಿಯವರು ವಿವಿಧ ಸಾಂಸ್ಕ್ರತಿಕ, ಕಸರತ್ತಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಜೊತೆಗೆ ಇದೇ ಪ್ರಥಮ ಬಾರಿಗೆ ಎರಡು ದಿನಗಳ ಕಾಲ ಕೃಷಿ ಮೇಳ ಹಮ್ಮಿಕೊಂಡಿರುವದು ಶ್ಲಾಘನೀಯ. ಮುಂದಿನ ವರ್ಷದ ಕೃಷಿ ಮೇಳವನ್ನು ಕೃಷಿಗೆ ಸಂಬಂಧಿಸಿದ ಎಲ್ಲ ಇಲಾಖೆಯ ಸಚಿವರೊಂದಿಗೆ ಸಂಪರ್ಕಿಸಿ ರಾಜ್ಯದಲ್ಲಿಯೇ ಮಾದರಿ ಕೃಷಿ ಮೇಳ ಆಯೋಜನೆಯಾಗುವಂತೆ ಕ್ರಮ ವಹಿಸಲಾಗುವುದು ಎಂದರು.
ಪ್ರಗತಿಪರ ರೈತ ಎಂ.ವೈ.ಕಟ್ಟಿ ಅವರು ಕಬ್ಬು ಬೆಳೆಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು ರೈತರು ಸರಿಯಾದ ಬೇಸಾಯ ಕ್ರಮ ಅನುಸರಿಸಿದರೆ ಎಕರೆಗೆ ೧೦೦ ಕ್ಕೂ ಹೆಚ್ಚು ಟನ್ ಕಬ್ಬು ಬೆಳೆಯಬಹುದು. ನೂರು ವರ್ಷದ ಹಿಂದೆ ಕೇವಲ ಸಗಣಿ ಗೊಬ್ಬರದಿಂದ ಹಿರಿಯರು ಉತ್ತಮ ಬೆಳೆ ಬೆಳೆಯುತ್ತಿದ್ದರು. ಇಂದು ರಾಸಾಯನಿಕ ಗೊಬ್ಬರ ಹೆಚ್ಚು ಬಳಕೆ ಮಾಡುವ ಮೂಲಕ ಆಹಾರವನ್ನು ವಿಷಕಾರಿಯಾಗಿದೆ. ಕಳೆದ ೫೫ ವರ್ಷದಿಂದ ಈಚೆಗೆ ಯೂರಿಯಾ ಗೊಬ್ಬರ ಹೆಚ್ಚು ಬಳಕೆ ನಂತರ ಬೆಳೆಗಳಿಗೆ ಹುಳು ಬಂದಿವೆ. ರೈತರು ವಿಜ್ಞಾನಿಗಳಾಗಿ ಬೇಸಾಯ ಮಾಡಬೇಕೆಂದರು.
ಹೆಚ್ಚು ರಾಸಾಯನಿಕ ಬಳಕೆಯಿಂದ ಬೆಲ್ಲ, ಸಕ್ಕರೆ ವಿಷಕಾರಿಯಾಗುತ್ತಿದೆ. ಗುಣಮಟ್ಟದ ಶುದ್ಧ ಕಬ್ಬು ಬೆಳೆಯುವ ವಿಧಾನ ಅರಿಯಬೇಕು. ರಾಸಾಯನಿಕ ಕೀಟನಾಶಕ ಬಳಕೆಯಿಂದ ಉಪಕಾರಿಯಾಗುವ ಕೀಟಗಳನ್ನು ಕೊಲ್ಲುತ್ತಿದ್ದೇವೆ. ನಿಮಗೆ ಸರಿಯೆನಿಸಿದ ಕಬ್ಬಿನ ತಳಿಯನ್ನು ಬೆಳೆಯಬೇಕು. ರೈತರು ಪಾರಂಪರಿಕ ಕೃಷಿ ಸತ್ಯವನ್ನು ಅರಿಯಬೇಕೆಂದರು.
ಬೇಸಾಯದ ಮುನ್ನ ಭೂಮಿಯ ಬಾಹ್ಯ ಪರಿಸ್ಥಿತಿ ಸುಧಾರಿಸಬೇಕು. ಉತ್ತಮ ತಳಿಗಳ ಆಯ್ಕೆ, ಭೂಮಿ, ಬೀಜದ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳನ್ನು ಅರಿತುಕೊಂಡು ಕಬ್ಬು ಬೆಳೆಯಬೇಕು. ವಿವಿಧ ತಳಿ ಕಬ್ಬು ಅನ್ನು ಪ್ರದರ್ಶಿಸಿ ಅವುಗಳ ಬೆಳೆಯುವ ವಿಧಾನ, ವಿವರ ಮಾಹಿತಿಯನ್ನು ರೈತರಿಗೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕೃಷಿ ಮೇಳದ ಸದುಪಯೋಗವನ್ನು ತಾಲೂಕು ಸೇರಿದಂತೆ ಜಿಲ್ಲೆಯ ರೈತ ಬಾಂಧವರು ಪಡೆದುಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ವಿಜಯಪುರ ಕೃಷಿ ಮಹಾವಿದ್ಯಾಲಯದ ಡೀನ್ ಎ.ಭೀಮಪ್ಪ, ವಿಸ್ತರಣಾಧಿಕಾರಿ ಡಾ.ರವೀಂದ್ರ ಬೆಳ್ಳಿ ಮಾತನಾಡಿದರು.
ಸಾನಿಧ್ಯವನ್ನು ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ, ಮುಖಂಡರಾದ ಅನಿಲ ಅಗರವಾಲ, ಶಿವನಗೌಡ ಬಿರಾದಾರ, ಸಂಗನಗೌಡ ಚಿಕ್ಕೊಂಡ, ಶೇಖರ ಗೊಳಸಂಗಿ, ಬಿ.ಕೆ.ಕಲ್ಲೂರ, ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ಬಸವರಾಜ ಗೊಳಸಂಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಡಿ.ಡಬ್ಲೂ.ರಾಜಶೇಖರ, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ ಇತರರು ಇದ್ದರು.
ರವಿ ರಾಠೋಡ ಸ್ವಾಗತಿಸಿದರು. ಎಂ.ಬಿ.ತೋಟದ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕೃಷಿ ಮೇಳದಂಗವಾಗಿ ಹಾಕಲಾಗಿದ್ದ ವಿವಿಧ ಮಳಿಗೆಗಳನ್ನು ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಅವರು ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ನಿಂಬೆ ಅಭಿವೃದ್ಧಿ ನಿಗಮದ ಮಳಿಗೆಗಳಿಗೆ ನೀಡಿ ಅಧಿಕಾರಿಗಳಿಂದ ವಿವಿಧ ಮಾಹಿತಿ ಪಡೆದುಕೊಂಡು ರೈತ ಬಾಂಧವರಿಗೆ ನೆರವಾಗುವಂತೆ ಸಲಹೆ ನೀಡಿದರು.
ಬಟ್ಟೆ, ಆಯುರ್ವೇದಿಕ ಅಂಗಡಿಗಳಿಗೆ ಭೇಟಿ ನೀಡಿದಾಗ ಕೆಲ ಆಯುರ್ವೇದಿಕ ಔಷಧಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ನೋವು ನಿವಾರಕ ಔಷಧಿ ಖರೀದಿಸುವ ಜೊತೆಗೆ ಖಾದಿ ಭಂಡಾರದಲ್ಲಿರುವ ಟಾವೆಲ್ ಸಹ ಖರೀದಿಸುವ ಮೂಲಕ ಚಾಲನೆ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

