ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರೆಯ ಮೂರನೇ ದಿನ ಬುಧವಾರ ಜಾತ್ರೆಯಲ್ಲಿ ಎಲ್ಲಿ ನೋಡಿದರೂ ಅಪಾರ ಜನಜಂಗುಳಿ ಕಂಡುಬಂದಿತ್ತು. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನತೆ ಆಗಮಿಸಿದ್ದು ಕಂಡುಬಂದಿತ್ತು.
ದೇವಸ್ಥಾನ ಮೂಲ ಜೀರ್ಣೋದ್ಧಾರಕ ದಿ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪ್ರತಿಮೆಯ ಆವರಣದಲ್ಲಿ ಜಾತ್ರೆಯಂಗವಾಗಿ ಬಂಜಾರ ಸಮಾಜ ಬಾಂಧವರ ಉಡುಗೆ-ತೊಡುಗೆ, ಅಲಂಕಾರಿಕ ಸಾಮಗ್ರಿಗಳ ಮಾರಾಟದ ಮಳಿಗೆಗಳು ಹೆಚ್ಚಾಗಿ ಕಂಡುಬಂದವು. ಈ ಮಳಿಗೆಯಲ್ಲಿ ಬಂಜಾರ ಸಮಾಜ ಬಾಂಧವರು ತಮಗೆ ಬೇಕಾದ ಉಡುಗೆ-ತೊಡುಗೆ, ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಈ ಜಾತ್ರೆಯ ಮೂರನೇ ದಿನ ಪಟ್ಟಣ ಸೇರಿದಂತೆ ತಾಲೂಕು, ವಿವಿಧೆಡೆಗಳಿಂದ ಬಂಜಾರ ಬಾಂಧವರು ಪ್ರತಿವರ್ಷ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುವದು ವಿಶೇಷ.
ದೇವಸ್ಥಾನದ ಹತ್ತಿರದ ಅಕ್ಕನಾಗಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ನಡೆಯುತ್ತಿರುವ ನಿರಂತರ ದಾಸೋಹದಲ್ಲಿ ಅಪಾರ ಪ್ರಮಾಣದ ಜನತೆ ಪ್ರಸಾದ ಸೇವಿಸಿದರು. ಜಾತ್ರೆಯ ಅಂಗಡಿ-ಮುಂಗಟ್ಟುಗಳಲ್ಲಿ, ವಿವಿಧ ಬಗೆಯ ತೂಗುತೊಟ್ಟಿಲು ಇರುವ ಜಾಗೆಯಲ್ಲಿ ಅಪಾರ ಪ್ರಮಾಣದ ಜನರು ಕಂಡುಬಂದರು. ಜಾತ್ರಾಮಹೋತ್ಸವದಲ್ಲಿ ಪಾಲಕರಿಂದ ತಪ್ಪಿಸಿಕೊಂಡಿದ್ದ ಪುಟ್ಟು ಮಗು ಬಳ್ಳಾವೂರಿನ ಅನನ್ಯ ಪ್ರದೀಪ ಪವಾರ ಅವಳನ್ನು ಸುರಕ್ಷಿತವಾಗಿ ಪೊಲೀಸ್ ಸಿಬ್ಬಂದಿ ತಕ್ಕೋಡ ಅವರು ಪಾಲಕರಿಗೆ ಒಪ್ಪಿಸಿದರು. ಈ ವರ್ಷದ ಜಾತ್ರೆಯಲ್ಲಿ ದೇವಸ್ಥಾನದ ಮಹಾದ್ವಾರದ ಮುಂಭಾಗ ಯಾವುದೇ ವಾಹನ ನಿಲುಗಡೆಯಾಗದಂತೆ ಮತ್ತು ಟ್ರಾಫಿಕ್ ಸಮಸ್ಯೆಯಾಗದಂತೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡುವ ಮೂಲಕ ಪೊಲೀಸ್ ಇಲಾಖೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

