ಪಿಒಪಿ ಗಣೇಶ ವಿಗ್ರಹ ಬಳಕೆ ಮಾಡದಂತೆ ಸೂಚನೆ
ವಿಜಯಪುರ: ಸರ್ಕಾರ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಹಾಗೂ ರಾಸಾಯನಿಕ ಬಣ್ಣ ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವುದನ್ನು ಮತ್ತು ಯಾವುದೇ ಜಲಮೂಲಗಳಲ್ಲಿ ನದಿ, ಕಾಲುವೆ, ಭಾವಿಗಳಲ್ಲಿ ವಿಸರ್ಜಿಸುವುದು ಸಂಪೂರ್ಣವಾಗಿ ನಿಷೇಧಿಸಿದೆ.
ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಕೃತಕ ಹೊಂಡಗಳನ್ನು ಹಾಗೂ ಸಂಚಾರ ಗಣೇಶ ವಿಸರ್ಜನಾ ವಾಹನಗಳ ಸೇವೆಯನ್ನು ಒದಗಿಸಲಾಗುತ್ತಿದ್ದು, ಕೇವಲ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಮಾತ್ರ ಬಳಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ನಗರದ ಸಾರ್ವಜನಿಕರು ಯಾವುದೇ ವಿಗ್ರಹಗಳನ್ನು ನದಿ-ಕಾಲುವೆ-ಭಾವಿಗಳಲ್ಲಿ ವಿಸರ್ಜಿಸದೇ, ಪಾಲಿಕೆ ವತಿಯಿಂದ ನಿರ್ಮಿಸಲಾದ ಕೃತಕ ಹೊಂಡಗಳು ಮತ್ತು ಸಂಚಾರಿ ಗಣೇಶ ವಿಸರ್ಜನಾ ವಾಹನಗಳಲ್ಲಿ ಗಣೇಸ ವಿಸರ್ಜನೆ ಮಾಡಬೇಕು. ಒಂದು ವೇಳೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿನಿಂದ ಹಾಗೂ ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸುವುದು ಕಂಡು ಬಂದಲ್ಲಿ ಕಾನೂನುರಿತ್ಯ ಕ್ರಮ ವಹಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
