ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರ ಜಾತ್ರಾಮಹೋತ್ಸವದ ಎರಡನೇ ದಿನವಾದ ಮಂಗಳವಾರ ದೇವಸ್ಥಾನದ ಪ್ರಾಂಗಣದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ಜನಪದ ಗಾಯಕರು ನಡೆಸಿಕೊಟ್ಟ ಭಜನಾ ಪದಗಳು, ಡೊಳ್ಳಿನ ಪದ ಜನರ ಮನರಂಜಿಸುವ ಜೊತೆಗೆ ಮನಸೂರೆಗೊಂಡವು.
ತಾಲೂಕಿನ ನಾಗೂರ ಗ್ರಾಮದ ಯಮುನೂರೇಶ್ವರ ಭಜನಾ ಮಂಡಳಿಯ ಹತ್ತು ವರ್ಷದ ಬಾಲಕಿ ಅನ್ನಪೂರ್ಣ ದೊಡ್ಡಮನಿ ಪ್ರಸ್ತುತ ಪಡಿಸಿದ ಭಜನಾಪದಗಳಿಗೆ ಜನರು ಮನಸೋತರು. ಇದೇ ತಂಡದ ಗಾಯಕರಾದ ಸುನೀತಾ ಬೀರಲದಿನ್ನಿ, ರುದ್ರಯ್ಯ ಹಿರೇಮಠ, ಮಲ್ಲಯ್ಯ ಶೀಕಳವಾಡಿಮಠ, ರುದ್ರಯ್ಯ ಹಿರೇಮಠ, ಬಾಲಗಾಯಕ ಮಲ್ಲಿಕಾರ್ಜುನ ಹಿರೇಮಠ ಅವರು ಸುಶ್ರಾವ್ಯವಾಗಿ ಭಜನಾ ಪದಗಳನ್ನು ಪ್ರಸ್ತುತಪಡಿಸುವ ಮೂಲಕ ನೆರೆದ ಜನರ ಮನಸೂರೆಗೊಂಡರು. ಇವರಿಗೆ ಕಾಂತು ಪಡೇಕನೂರ, ಮಲ್ಲು ಸಜ್ಜನ, ಹಣಮಂತ ಹುಣಶ್ಯಾಳ, ಹಣಮಂತ ದಿಂಡವಾರ, ನಿಂಗಪ್ಪ ಹೂಗಾರ ಅವರು ವಿವಿಧ ವಾದ್ಯಗಳನ್ನು ನುಡಿಸುವ ಮೂಲಕ ಸಂಗೀತ ಸಾಥ್ ನೀಡಿದರು.
ತಳೇವಾಡದ ಶ್ರೀಸದ್ಗುರು ಸಾದುಮುತ್ಯಾ ಭಜನಾ ಮಂಡಳದ ಬಾಲಗಾಯಕರಾದ ಸಹೋದರಿಯರಾದ ರೂಪಾ ಐಹೊಳ್ಳಿ, ಸುಶ್ಮಿತಾ ಐಹೊಳ್ಳಿ, ನಗನೂರಿನ ಚೌಡೇಶ್ವಿರ ಭಜನಾ ಮಂಡಳಿಯ ಬಾಲಗಾಯಕರಾದ ದೀಪಾ ಡೊಡ್ಡಮನಿ, ಜ್ಯೋತಿ ದೊಡ್ಡಮನಿ ಅವರ ಭಜನಾ ಪದಗಳಿಗೆ ಜನತೆ ಮನಸೋತರು.
ದೇವಸ್ಥಾನದ ಪ್ರಾಂಗಣದಲ್ಲಿ ಗೊಳಸಂಗಿಯ ಬೀರಲಿಂಗೇಶ್ವರ ಗಾಯನ ಸಂಘದ ಬಾಲಗಾಯಕರಾದ ಸುಮಿತ್ರಾ ಗೊಳಸಂಗಿ, ರೇಣುಕಾ ಗೊಳಸಂಗಿ, ಭಾಗ್ಯಶ್ರೀ ಗೊಳಸಂಗಿ ಅವರು ಹಾಡಿದ ಡೊಳ್ಳಿನ ಪದಗಳು, ಸೋಲವಾಡಗಿಯ ಅಮೋಘಸಿದ್ದೇಶ್ವರ ಡೊಳ್ಳಿನ ಮೇಳದ ಗಾಯಕರಾದ ಸಿದ್ದು ಮಾಸ್ತರ ಸಾಲವಾಡಗಿ, ಮುತ್ತಣ್ಣ, ಮುದಕಣ್ಣ ಮಾಸ್ತರ ಬಾಗೇವಾಡಿ, ಸಿದ್ದು ಇಂಗಳಗಿ ಅವರು ಹಾಡಿದ ಡೊಳ್ಳಿನ ಪದಗಳು, ದೇವಸ್ಥಾನದ ನಂದೀಶ್ವರ ರಂಗಮಂದಿರ ಮುಂಭಾಗ ಬಸವನಬಾಗೇವಾಡಿಯ ಅಮೋಘಸಿದ್ದೇಶ್ವರ ಗಾಯನ ಸಂಘದ ರೇವಣಸಿದ್ದ ದೇಸಾಯಿ, ಮಾಳಿಂಗರಾಯ ಡೊಳ್ಳಿನ ಗಾಯನ ಸಂಘದ ಲೇಸು ಪೂಜಾರಿ ಅವರು ಪ್ರಸ್ತುತ ಪಡಿಸಿದ ಡೊಳ್ಳಿನ ಪದಗಳನ್ನು ಜನತೆ ಶಾಂತಚಿತ್ತರಾಗಿ ಆಲಿಸುವ ಮೂಲಕ ಜನಪದ ಸಾಹಿತ್ಯವನ್ನು ಆಲಿಸುವ ಮೂಲಕ ಸಂಭ್ರಮಿಸಿದರು.
ಇನ್ನೊಂದೆಡೆ ಜಾತ್ರೆಯಂಗವಾಗಿ ಅಗರವಾಲ ಅವರ ಜಮೀನಿನಲ್ಲಿ ಹಾಕಲಾಗಿರುವ ವಿವಿಧ ಮಳಿಗೆ ಜಾಗೆಯಲ್ಲಿ ಅಪಾರ ಸಂಖ್ಯೆಯ ಜನರು ಕಂಡುಬಂದರು. ಜಾತ್ರಾ ಆರಂಭದಿನದ ಜನತೆ ದೇವರ ದರ್ಶನ, ಪಲ್ಲಕ್ಕಿ ಉತ್ಸವ, ಸಿಡಿಮದ್ದು ವೀಕ್ಷಣೆಯಲ್ಲಿ ಹೆಚ್ಚು ಭಾಗವಹಿಸಿದ್ದರಿಂದಾಗಿ ಮಳಿಗೆಗಳ ಕಡೆಗೆ ಅಷ್ಟಾಗಿ ಆಗಮಿಸಿರಲಿಲ್ಲ. ಜಾತ್ರೆಯ ಎರಡನೇ ದಿನವಾದ ಮಂಗಳವಾರ ಜನರು ತಮ್ಮ ಕುಟುಂಬ ಸದಸ್ಯರು, ಮಕ್ಕಳೊಂದಿಗೆ ಆಗಮಿಸಿ ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವ ಜೊತೆಗೆ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಕೊಡಿಸುವದು ಕಂಡುಬಂದಿತ್ತು. ಗೋಬಿಮಂಚೂರಿ, ನೂಡಲ್ಸ್, ಪಾವಬಾಜಿ, ರೈಸ್, ಬಜ್ಜಿ ಅಂಗಡಿ, ಪೊಟೋಟೊ ಚಿಪ್ಸ್ ಸೇರಿದಂತೆ ತಿಂಡಿ-ತಿನಿಸುಗಳ ಅಂಗಡಿಗಳಲ್ಲಿ ಜನರು ತಮಗೆ ಬೇಕಾದ ತಿಂಡಿ-ತಿನಿಸು ಸವಿದರು. ಮಕ್ಕಳು ಸೇರಿದಂತೆ ಹಿರಿಯರು ವಿವಿಧ ತೂಗುತೊಟ್ಟಿಲು, ಬ್ರೇಕ್ ಡ್ಯಾನ್ಸ್ ತೊಟ್ಟಿಲುಗಳಲ್ಲಿ ಕುಳಿತು ಸಂಭ್ರಮಿಸುವದು ಕಂಡುಬಂದಿತ್ತು.
ಪಟ್ಟಣದ ಗುರುಕೃಪಾ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ಜಂಗಿ ಕುಸ್ತಿಗಳು ಜರುಗಿದವು. ಜಂಗಿ ಕುಸ್ತಿಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಆಗಮಿಸಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಜಾತ್ರೆಯ ಮೂರನೇ ದಿನ ಬುಧವಾರ ಬೆಳಗ್ಗೆ 9 ಗಂಟೆಗೆ ನಡೆಯುವ ವಿವಿಧ ಕಸರತ್ತಿನ ಪ್ರದರ್ಶನ, ಭಾರ ಎತ್ತುವ ಸ್ಪರ್ಧೆ ಹಾಗೂ ಮಧ್ಯಾನ್ಹ ೩ ಗಂಟೆಗೆ ನಡೆಯುವ ನಿರ್ಣಾಯಕ ನಿರ್ಣಾಯಕ ಜಂಗೀ ಕುಸ್ತಿಗಳನ್ನು ವೀಕ್ಷಿಸಲು ಅಪಾರ ಪ್ರಮಾಣದ ಜನರು ಆಗಮಿಸುವದು ವಿಶೇಷ.
ಜಾತ್ರೆಯಂಗವಾಗಿ ದೇವಸ್ಥಾನದ ನಂದೀಶ್ವರ ರಂಗಮಂದಿರದಲ್ಲಿ ರಾತ್ರಿ ೧೦.೩೦ ಗಂಟೆಗೆ ಬಸವನಬಾಗೇವಾಡಿಯ ಬಸವೇಶ್ವರ ಬೈಲಾಟ ಸಂಘದಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂಬ ಭಕ್ತಿ ಪ್ರದಾನ ನಾಟಕ ಪ್ರದರ್ಶನವಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

