ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಭಕ್ತರ ಜಯಘೋಷ, ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರ ಹೇಳಿಕೆ ನುಡಿದ ನಂತರ ದೇವಸ್ಥಾನದಲ್ಲಿರುವ ಬೆಳ್ಳಿ ಪಲ್ಲಕ್ಕಿ ಇಡುವ ಕಟ್ಟೆಗೆ ಮರಳುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತ್ತು.
ಪಟ್ಟಣದಿಂದ ಸುಮಾರು ೫ ಕಿಮೀ ಅಂತರದಲ್ಲಿರುವ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಸೋಮವಾರ ತೆರಳಿದ್ದ ಮೂಲನಂದೀಶ್ವರ(ಬಸವೇಶ್ವರ) ದೇವರ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಜೆ ಆಕರ್ಷಕ ಸಿಡಿಮದ್ದು, ವಿವಿಧ ಕಲಾ ತಂಡಗಳ ಮೆರವಣಿಗೆ, ವಿವಿಧ ವಾದ್ಯಮೇಳದೊಂದಿಗೆ ಭಕ್ತರ ಜಯಘೋಷದೊಂದಿಗೆ ಪುರ ಪ್ರವೇಶ ಮಾಡಿದ ನಂತರ ಅದ್ದೂರಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿದ ನಂತರ ರಾತ್ರಿ ಪಲ್ಲಕ್ಕಿ ಪಲ್ಲಕ್ಕಿ ಕಟ್ಟೆಗೆ ಮರಳಿತು. ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರು ಆಗಮಿಸಿದ ನಂತರ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಪ್ರದಕ್ಷಿಣೆ ಹಾಕಿದ ನಂತರ ಶಿವಾನಂದ ಈರಕಾರಮುತ್ಯಾ ಅವರು ಈ ವರ್ಷದ ಮಳೆ-ಬೆಳೆ ಹೇಳಿಕೆ ನುಡಿದರು. ಈರಕಾರಮುತ್ಯಾ ನುಡಿದ ಹೇಳಿಕೆಯನ್ನು ಹಿರಿಯರಾದ ಬಸವರಾಜ ಹಾರಿವಾಳ ಅವರು ಕೇಳಿ ನೆರೆದ ಭಕ್ತಗಣಕ್ಕೆ ಧ್ವನಿವರ್ದಕದ ಮೂಲಕ ಹೇಳಿದರು. ಹೇಳಿಕೆ ನುಡಿಯಾಗುತ್ತಿದ್ದಂತೆ ಪಲ್ಲಕ್ಕಿಯು ಇನ್ನೊಂದು ಪ್ರದಕ್ಷಿಣೆ ಹಾಕಿದ ನಂತರ ಪಲ್ಲಕ್ಕಿ ಸ್ವಸ್ಥಾನಕ್ಕೆ ಆಗಮಿಸುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತ್ತು.
ಶಿವಾನಂದ ಈರಕಾರಮುತ್ಯಾ ನುಡಿದ ಹೇಳಿಕೆಗಳುಃ ಹುಬ್ಬಿ, ಉತ್ತರಿ ಮಳಿಗೆ ಮಂಡಿ ಕಟ್ಟಿಸಿನಿ, ಹಸ್ತ ಚಿತ್ತಿ ಮಳಿ ಒಕ್ಕಲಿಗ್ಯಾಗ ಹಸ್ತಾಗ ಹಾಲು ಹಾಕಿನಿ, ಸಾತಿ ಮಳಿ ನಾಲ್ಕು ಮೂಲಿ ಸೋಸಿ ನೋಡುವದರೊಳಗ ಒಂದು ಮೂಲಿ ಕಸರ ಉಳಿತು, ಹತ್ತು ಕಾಳಿನಲ್ಲಿ ಬಿಳಿ ಕಾಳು ಮೇಲು, ಹತ್ತಿ ಸಾಲಾಗ ಹಮಿಣಿ ವಗದಿನಿ, ಒಕ್ಕಲಿಗ್ಯಾಗ ಚಿಂತಿ ಮಾಡಬೇಡ ನಾಲ್ಕು ಮೂಲಿಗೆ ಜಾಡಿ ಟೊಪ್ಪಿಗಿ ಹಾಕೊಂಡು ಮೂಲಿ ಮೂಲಿಗೆ ನಿಂತಿನಿ, ಗೋಧಿ, ಕುಸಬಿ, ಕಡ್ಲಿ,ಜೋಳದ ಬೆನ್ನ ಹತ್ಯಾವ, ಅಪ್ಪನ ಮ್ಯಾಲಿ ನಂಬಿಗೆ ಇಟ್ಟು ನಡದವನ ಮನಿಯಾಗ ಬಂಗಾರದ ಕಂಬ ಆಗಿ ಇರತಿನಿ ಎಂಬ ಈ ವರ್ಷದ ಹೇಳಿಕೆಗಳನ್ನು ಶಿವಾನಂದ ಈರಕಾರಮುತ್ಯಾ ನುಡಿದರು.
ಪಲ್ಲಕ್ಕಿ ಉತ್ಸವದಲ್ಲಿ ಗಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಚಂದ್ರಶೇಖರ ಮುರಾಳ, ನಿಂಗಪ್ಪ ಜೈನಾಪುರ, ಬಸವಂತ ಅಡಗಿಮನಿ, ಸಂಗಪ್ಪ ವಾಡೇದ, ಪಾವಡೆಪ್ಪ ಕರಮಳಕರ, ಶರಣಪ್ಪ ಕೂಡಗಿ, ನಾಗಪ್ಪ ಬಾಡಗಿ, ಮೀರಾಸಾಬ ಕೊರಬು, ಸಿದ್ದಲಿಂಗ ಪೂಜಾರಿ, ಗಿರೀಶ ಬಿರಾದಾರ, ಪುಟ್ಟು ಪಟ್ಟಣಶೆಟ್ಟಿ, ಶಿವು ಸಿಂದಗಿ, ಕುಮಾರ ಒಣರೊಟ್ಟಿ, ಪರಶುರಾಮ ದೇವಕರ, ಸಿದ್ದು ಚವ್ಹಾಣ, ಪ್ರಭು ಮಾಲಗಾರ, ಮಂಜು ಹಾರಿವಾಳ, ಭೀಮು ನಿಕ್ಕಂ, ಮಲ್ಲು ಡೋಣೂರ, ಸಂತೋಷ ಕೂಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ವರಪ್ರಸಾದದಿಂದ ಬಸವೇಶ್ವರರ ತಾಯಿ ಮಾದಲಾಂಬಿಕೆಯು ಬಸವೇಶ್ವರರ ಜನ್ಮ ನೀಡಿದಳು ಎಂಬ ಪ್ರತೀತಿಯಿದೆ. ಬಸವೇಶ್ವರರು ಬಾಲ್ಯದಲ್ಲಿ ಜನ್ಮಸ್ಥಳ ಬಸವನಬಾಗೇವಾಡಿಯ ಮೂಲನಂದೀಶ್ವರ ದೇವಸ್ಥಾನ ಪ್ರಾಂಗಣ, ಬಾವಿಯ ಸುತ್ತಮುತ್ತ ತನ್ನ ಗೆಳೆಯರರೊಂದಿಗೆ ಆಟ ಆಡುವ ಜೊತೆಗೆ ಸಮೀಪದ ಹೋರಿಮಟ್ಟಿ ಗುಡ್ಡದಲ್ಲಿಯೂ ತನ್ನ ಬಾಲ್ಯದ ಆಟ, ಪೂಜೆ ಪುನಸ್ಕಾರ ಮಾಡಿದ್ದರು. ಇದ ಸವಿನೆನಪಿಗಾಗಿ ಪಲ್ಲಕ್ಕಿ ಉತ್ಸವವು ಹೋರಿಮಟ್ಟಿ ಗುಡ್ಡಕ್ಕೆ ತೆರಳಿ ಮರಳಿ ದೇವಸ್ಥಾನಕ್ಕೆ ಬರುತ್ತದೆ ಎಂಬ ಪ್ರತೀತಿಯೂ ಇದೆ. ಇದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಅಗತ್ಯವಿದೆ.

