ವಿಜಯಪುರ: ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಪ್ರತಿ ಕ್ವಿಂಟಲ್‌ಗೆ ೭೨೮೦ ರೂ. ಬೆಂಬಲ ಬೆಲೆಯಡಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ನಿರ್ಧರಿಸಲಾಗಿದೆ.
ಕನಿಷ್ಠ ಬೆಂಬಲೆ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಟಿ.ಭೂಭಾಲನ್ ಅವರ ಅಧ್ಯಕ್ಷತೆಯಲ್ಲಿ ಆ.೨೬ರಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ೧೭೪೫ ಹೆಕ್ಟೇರ್ ಕ್ಷೇತ್ರದಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದ್ದು, ಅಂದಾಜು ೨೬೧೭೫ ಕ್ವಿಂಟಲ್ ಇಳುವರಿ ಅಂದಾಜಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ರೂ. ೪೪೦೦ ರಿಂದ ೪೮೦೦ ವರೆಗಿನ ದರದಲ್ಲಿ ಮಾರಾಟವಾಗುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್ ೭೨೮೦ ರೂ.ಗೆ ಖರೀದಿಸಲು ತೀರ್ಮಾನಿಸಲಾಗಿದ್ದು, ನ್ಯಾಫೆಡ್ ಸಂಸ್ಥೆಯನ್ನು ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ಬೆಂಗಳೂರು ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರಿದಿ ಸಂಸ್ಥೆಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಕೆಓಎಫ್ ಸಂಸ್ಥೆಯ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳನ್ನು ಖರೀದಿ ಕೇಂದ್ರಗಳೆಂದು ಪರಿಗಣಿಸಿ ರೈತರ ನೊಂದಣಿಯೊಂದಿಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲೆಯ ಬಬಲೇಶ್ವರ, ಸವನಹಳ್ಳಿ, ಬೆಳ್ಳುಬ್ಬಿ, ತಾಜಪುರ, ತಂಗಡಗಿ, ಚಡಚಣ, ಹಲಸಂಗಿ, ಸಿಂದಗಿ ಹಾಗೂ ಬಸವನಬಾಗೇವಾಡಿ ಸೇರಿದಂತೆ ಒಟ್ಟು ೯ ಖರೀದಿ ಕೇಂದ್ರಗಳನ್ನು ತೆರೆಯಲಾಘಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ ೩ ಕ್ವಿಂಟಾಲ್‌ನಂತೆ ಹಾಗೂ ರೈತರಿಂದ ಗರಿಷ್ಠ ೧೫ ಕ್ವಿಂಟಾಲ್ ಎಪ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ತೀರ್ಮಾನಿಸಿ, ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು ಕೆಓಎಫ್ ವಿಜಯಪುರ ಮೊ: ೯೯೦೦೫೫೩೦೫೪ ಸಂಖ್ಯೆಗೆ ಸಂಪರ್ಕಿಸಲು ತಿಳಿಸಲಾಗಿದೆ.
ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳನ್ವಯ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆ ಆಗುವಂತೆ ಪಾವತಿ ಮಾಡಬೇಕು. ಆವರ್ತನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಖರೀದಿ ಕೇಂದ್ರಗಳಲ್ಲಿ ವರ್ತಕರು ತರುವ ಸೂರ್ಯಕಾಂತಿ ಖರೀದಿಸದಂತೆ ಹಾಗೂ ಯಾವುದೇ ರೀತಿಯ ದುರುಪಯೋಗವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು ಎಂದು ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
