ಬಸವನಬಾಗೇವಾಡಿ: ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೇವ ಮೂಲನಂದೀಶ್ವರ (ಬಸವೇಶ್ವರ) ಐತಿಹಾಸಿಕ ಜಾತ್ರಾಮಹೋತ್ಸವವು ಸೋಮವಾರ ಸಾಂಪ್ರದಾಯಿಕ ಮೂಲನಂದೀಶ್ವರ(ಬಸವೇಶ್ವರ) ಪಲ್ಲಕ್ಕಿ ಉತ್ಸವಕ್ಕೆ ಅಪಾರ ಜನಸ್ತೋಮದ ಬಸವ ಜಯಘೋಷದೊಂದಿಗೆ ಚಾಲನೆ ದೊರಕಿ, ಪಲ್ಲಕ್ಕಿ ಉತ್ಸವವು ಸಂಭ್ರಮ, ಸಡಗರದಿಂದ ಜರುಗಿತು.
ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಮೂಲನಂದೀಶ್ವರ ದೇವರಿಗೆ ಬೆಳಗ್ಗೆ ರುದ್ರಾಭಿಷೇಕ,ರುದ್ರಾಭಿಷೇಕ ನೆರವೇರಿದ ನಂತರ ಮೂಲನಂದೀಶ್ವರ ದೇವರಿಗೆ ಜಾತ್ರಾಯಂಗವಾಗಿ ಬೆಳ್ಳಿ ಅಲಂಕಾರ ವಿಶೇಷ ಪೂಜೆಯನ್ನು ಅರ್ಚಕರಾದ ಗೌರಿಶಂಕರ ಚರಂತಿಮಠ, ವಿಶ್ವನಾಥ ಕಾಳಹಸ್ತೇಶ್ವರಮಠ ನೆರವೇರಿಸಿದರು. ಬೆಳಗಿನ ಮೂರು ಗಂಟೆಯಿಂದಲೇ ವಿವಿಧೆಡೆಗಳಿಂದ ಆಗಮಿಸಿದ್ದ ರಾಜ್ಯದ ವಿವಿಧ ಜಿಲ್ಲೆ, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಅಭಿಷೇಕ ಮಾಡಿಸಿ ಭಕ್ತಿಭಾವ ಸಮರ್ಪಿಸಿದರು. ಅಪಾರ ಪ್ರಮಾಣದ ಭಕ್ತರು ದೇವಸ್ಥಾನದ ಸುತ್ತಲೂ ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು. ಕೆಲವರು ದೇವರಿಗೆ ಎಲೆ ಪೂಜೆ ಮಾಡಿಸಿದರು.
ಸಂಪ್ರದಾಯದಂತೆ ದೇವಸ್ಥಾನದಿಂದ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು, ಬಸವ ಭಕ್ತರು ವಿರಕ್ತಮಠಕ್ಕೆ ತೆರಳಿ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ವಿವಿಧ ವಾದ್ಯಮೇಳದೊಂದಿಗೆ ಬರಮಾಡಿಕೊಂಡರು. ನಂತರ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಹಿರಿಯ ಸಮ್ಮುಖದಲ್ಲಿ ದೇವಸ್ಥಾನದಲ್ಲಿದ್ದ ಬೆಳ್ಳಿ ನಂದಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಕಟ್ಟೆಯವರೆಗೆ ತೆಗೆದುಕೊಂಡು ಬಂದು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಬೆಳ್ಳಿ ಉತ್ಸವ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿದ ನಂತರ ಭಕ್ತರ ಜಯಘೋಷದೊಂದಿಗೆ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರಕಿತು. ಸಚಿವ ಶಿವಾನಂದ ಪಾಟೀಲ ಅವರು ದೇವಸ್ಥಾನದ ಆವರಣ ದಾಟುವವರೆಗೂ ಪಲ್ಲಕ್ಕಿ ಹೊತ್ತು ಸಾಗಿದರು.
ನಂತರ ಪಲ್ಲಕ್ಕಿಯು ಸಂಪ್ರದಾಯದಂತೆ ಶಿವಪ್ಪ ಮೋದಿ ಅವರ ಮನೆಗೆ ತೆರಳಿ ಐತಿಹಾಸಿಕ ಹೋರಿಮಟ್ಟಿ ಗುಡ್ಡದ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ನಿಡಗುಂದಿ ಮನೆತನದವರು ಕಳಸ ಹೊತ್ತುಕೊಂಡ ನಂತರ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಅಗಸಿ, ಬಸವೇಶ್ವರ ವೃತ್ತ, ಇಂಗಳೇಶ್ವರ ರಸ್ತೆ ಮಾರ್ಗವಾಗಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಅಪಾರ ಭಕ್ತರೊಂದಿಗೆ ತೆರಳಿತು. ಹೋರಿಮಟ್ಟಿ ಗುಡ್ಡಕ್ಕೆ ಪಲ್ಲಕ್ಕಿ ಉತ್ಸವ ತೆರಳಿದ ನಂತರ ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಗೆ ಈ ವರ್ಷದ ಹೇಳಿಕೆಗಳು ಜರುಗಿದವು. ನಂತರ ಬಸವನಹಟ್ಟಿ ಗ್ರಾಮಕ್ಕೆ ತೆರಳಿದ ಗ್ರಾಮಸ್ಥರು ಪಲ್ಲಕ್ಕಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯು ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ಬರುತ್ತಿದ್ದಂತೆ ಭಕ್ತರು ಪಲ್ಲಕ್ಕಿ ಹೊತ್ತು ಭಕ್ತಿ ಭಾವ ಮೆರೆದರು. ಕೆಲ ಭಕ್ತರು ಪಲ್ಲಕ್ಕಿ ಮುಂದೆ ಉರುಳುಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು. ಇದೇ ಸಂದರ್ಭದಲ್ಲಿ ಕೊಟ್ರಶೆಟ್ಟಿ ಮನೆತನದವರು ಮನೆಯಿಂದ ತಂದಿದ್ದ ಕಿಚಡಿ, ಭಾನ, ಚಟ್ನಿ, ಚಪಾತಿ, ಕುಂಬಳಕಾಯಿ, ಪಲ್ಯೆ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ಭಕ್ತರಿಗೆ ದಾಸೋಹ ಸೇವೆಗೈದರು. ನಂತರ ಪಲ್ಲಕ್ಕಿಗೆ ವಾಡೇದ ಅವರ ತೋಟಕ್ಕೆ ಆಗಮಿಸಿದ ನಂತರ ಭಕ್ತರು ಪೂಜೆ ಸಲ್ಲಿಸಿದರು. ಸಂಜೆ ಪಲ್ಲಕ್ಕಿಯು ಪಟ್ಟಣದ ಕಂಬಿಕಟ್ಟೆಗೆ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆ ಭಕ್ತಸಮೂಹ ಬಸವ ಜಯಘೋಷದೊಂದಿಗೆ ಭವ್ಯವಾಗಿ ಸ್ವಾಗತಿಸಿಕೊಂಡರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಸಿಡಿಮದ್ದು ಜನಮನಸೂರೆಗೊಂಡಿತು. ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಅಕ್ಕನಾಗಮ್ಮ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಕಲಾತಂಡಗಳ ಮೆರಗುಃ ಪಲ್ಲಕ್ಕಿ ಉತ್ಸವದಲ್ಲಿ ಭಟ್ಕಳದ ಚಂಡಿಮೇಳ, ಆಲಗೂರಿನ ಆದೀಶ್ವರ ಬ್ಯಾಂಡ್, ಕಾಖಂಡಕಿಯ ಕರಡಿಮಜಲು, ಸಂಬಾಳ, ಸಾರವಾಡದ ಗೊಂಬೆ, ಬಸವನಬಾಗೇವಾಡಿಯ ಗೊಂಬೆ ಕುಣಿತ, ಕುದರೆಕುಣಿತ,ಕೊಣ್ಣೂರಿನ ಡೊಳ್ಳಿನ ಮೇಳ ಸೇರಿದಂತೆ ವಿವಿಧ ಕಲಾತಂಡಗಳು, ವಾದ್ಯಮೇಳಗಳು, ಗಜರಾಜ ಉತ್ಸವಕ್ಕೆ ಮೆರಗು ತಂದವು.
ಪಲ್ಲಕ್ಕಿ ಉತ್ಸವದಲ್ಲಿ ಸಿದ್ದಲಿಂಗ ಸ್ವಾಮೀಜಿ, ಪ್ರವಚನಕಾರ ಶಿವಕುಮಾರ ಸ್ವಾಮೀಜಿ, ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ, ಮಂಡಳಿಯ ಲೆಕ್ಕ ಅಽಕ್ಷಕ ಬಸವರಾಜ ಕಳ್ಳಿ, ವಿಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ವಿವಿಧ ಸಂಘ-ಸಂಸ್ಥೆಯ ಮುಖ್ಯಸ್ಥರಾದ, ಮುಖಂಡರಾದ ಭರತು ಅಗರವಾಲ, ಬಸವರಾಜ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಸೋಮಪುರ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ರವಿಗೌಡ ಚಿಕ್ಕೊಂಡ, ಶಿವಾನಂದ ಮಂಗಾನವರ, ಬಸವರಾಜ ನಾಯ್ಕೋಡಿ, ಸುರೇಶಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಮಲ್ಲಿಕಾರ್ಜುನ ನಾಯಕ, ಜಟ್ಟಿಂಗರಾಯ ಮಾಲಗಾರ, ರವಿ ಪಟ್ಟಣಶೆಟ್ಟಿ, ಜಗದೇವಿ ಗುಂಡಳ್ಳಿ, ಮಹಾಂತೇಶ ಹಂಜಗಿ, ಸಂಕನಗೌಡ ಪಾಟೀಲ, ರಾಜೇಂದ್ರ ಪತ್ತಾರ, ಅನಿಲ ದುಂಬಾಳಿ, ಮೀರಾಸಾಬ ಕೊರಬು, ರಮೇಶ ಯಳಮೇಲಿ, ಸಂಗಪ್ಪ ವಾಡೇದ, ಸಿ.ಎಸ್.ಪಾಟೀಲ, ಸಂಗಯ್ಯ ಒಡೆಯರ, ಜಗದೀಶ ಕೊಟ್ರಶೆಟ್ಟಿ, ವಿನುತ ಕಲ್ಲೂರ, ಉಮೇಶ ಹಾರಿವಾಳ, ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಶಿವಲಿಂಗಯ್ಯ ತೆಗ್ಗಿನಮಠ, ಸಂಗನಗೌಡ ಚಿಕ್ಕೊಂಡ, ಹರೀಶ ಅಗರವಾಲ, ಸಂಗನಬಸು ಪೂಜಾರಿ, ಎಂ.ಬಿ.ತೋಟದ, ಬಸವರಾಜ ಪೂಜಾರಿ, ವಿವೇಕಾನಂದ ಕಲ್ಯಾಣಶೆಟ್ಟಿ, ವಿ.ಬಿ.ಮರ್ತುರ ಅಪಾರ ಪ್ರಮಾಣದ ಜನಸ್ತೋಮ ಭಾಗವಹಿಸಿತ್ತು.
ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ವಿವೇಕ ಬಿಗ್ರೇಡ್, ಪವಾಡ ಬಸವೇಶ್ವರ ಗೆಳೆಯರ ಬಳಗ ಸೇರಿದಂತೆ ವಿವಿಧ ಯುವಕರು ಭಕ್ತರಿಗೆ ಪ್ರಸಾದ ಸೇವೆ ಸಲ್ಲಿಸಿದರು. ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ವಿಜಯ ಮುರಗುಂಡಿ ಅವರು ದೇವಸ್ಥಾನದ ದ್ವಾರಬಾಗಿಲು ಮುಂಭಾಗ ಟ್ರಾಫಿಕ್ ಸಮಸ್ಯೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಂಡಿದ್ದರು. ದೇವಸ್ಥಾನದ ಮುಖ್ಯದ್ವಾರದ ಮುಂಭಾಗ ವಾಹನಗಳ ನಿಲುಗಡೆಯಾಗದಂತೆ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಜೊತೆಗೆ ಅಂಗಡಿ ಮಳಿಗೆಯ ಮೇಲೆ ಹಾಕಲಾಗಿದ್ದ ಶಾಮಿಯಾನದಲ್ಲಿ ಕುಳಿತ ಪೊಲೀಸ್ ಸಿಬ್ಬಂದಿಗಳು ದ್ವಾರ ಬಾಗಿಲು ಮುಂದೆ ವಾಹನಗಳನ್ನು ನಿಲ್ಲಿಸಿದಂತೆ ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರ ತಮ್ಮ ವಾಹನಗಳನ್ನು ನಿಲ್ಲಿಸುವಂತೆ ಧ್ವನಿವರ್ದಕ ಮೂಲಕ ಹೇಳುತ್ತಿರುವುದು ಕಂಡುಬಂದಿತ್ತು. ಇದರಿಂದಾಗಿ ಈ ವರ್ಷದ ಜಾತ್ರೆಯಲ್ಲಿ ಅಷ್ಟಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಲಿಲ್ಲ. ಮಳಿಗೆ ಇರುವ ಸ್ಥಳಕ್ಕೆ ಯಾವುದೇ ವಾಹನ ಹೋಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಜಾತ್ರೆಯ ಮಳಿಗೆಗಳನ್ನು ಹಾಕಿಸಿದೇ ದೇವಸ್ಥಾನದ ಪಕ್ಕದಲ್ಲಿರುವ ಜಮೀನಿನಲ್ಲಿ ಹಾಕಿಸಿದ್ದು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಆಶಾ ಕಾರ್ಯಕರ್ತರು ಜನರ ಆರೋಗ್ಯ ರಕ್ಷಣೆಗೆ ಕೆಲವೋ ಔಷಧಗಳನ್ನು ದೇವಸ್ಥಾನದ ಕಚೇರಿ ಮುಂದೆ ಟೇಬಲ್ ಮೇಲೆ ಇಟ್ಟುಕೊಂಡು ಕುಳಿತುಕೊಂಡಿದ್ದರು. ದೇವಸ್ಥಾನದ ದರ್ಶನ ಪಡೆದುಕೊಂಡ ನಂತರ ಜನತೆ ಜಾತ್ರೆಯಲ್ಲಿ ತಮಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

