ಇಂಡಿ: ಇಂಡಿಯ ಶಿಕ್ಷಣ ಇಲಾಖೆ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು, ನಿಂಬೆ ಅಭಿವೃದ್ದಿ ಮಂಡಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ ವಿಜ್ಞಾನ ಕೇಂದ್ರ, ಭೂ ಸೇನಾ ನಿಗಮ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಮೇಲಾಧಿಕಾರಿಗಳು ಇರುವುದೇ ಅಪರೂಪ.
ಅವರ ಮನೆಗಳು ವಿಜಯಪುರದಲ್ಲಿ ಇದ್ದು ಇಲ್ಲಿರುವದು ನಮ್ಮ ಮನೆ. ನಾವು ಇಂಡಿಗೆ ಬರುವದು ಸುಮ್ಮನೆ ಎಂಬಂತಾಗಿದೆ ಇಂಡಿಯ ಇಲಾಖೆಗಳ ಆಡಳಿತ ವ್ಯವಸ್ಥೆ.
ಇಲಾಖೆಯ ಮುಖ್ಯಸ್ಥರು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ನಿಯಮ ಇದೆ. ಆದರೆ ಇಲ್ಲಿ ಯಾರೂ ಕ್ಯಾರೆ ಎನ್ನುತ್ತಿಲ್ಲ.
ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಹಿಡಿದು ಅದೇ ಇಲಾಖೆಯ ಕಚೇರಿಯಲ್ಲಿ ನಾಲ್ಕು ಅಧಿಕಾರಿಗಳು ವಿಜಯಪುರದಿಂದ ರೈಲಿನಿಂದ ೧೨ ಗಂಟೆಗೆ ವಿಜಯಪುರ ಬಿಟ್ಟು ಇಂಡಿಗೆ ಒಂದು ಗಂಟೆಗೆ ಬರುತ್ತಾರೆ. ಮತ್ತು ೪ ಗಂಟೆಯ ರೈಲಿಗೆ ಮರಳಿ ಹೋಗುತ್ತಾರೆ.
ಒಂದು ವೇಳೆ ಯಾವದೇ ಕಾರಣಕ್ಕೆ ೪ ಗಂಟೆ ರೈಲು ತಪ್ಪಿದರೆ ಇಲಾಖೆಯ ವಾಹನ ತೆಗೆದುಕೊಂಡು ನಾಲ್ಕು ಜನ ವಿಜಯಪುರಕ್ಕೆ ಹೋಗುತ್ತಾರೆ. ಯಾವದೇ ಶಾಲೆಗಳಿಗೆ ಭೇಟಿ ನೀಡುವದಿಲ್ಲ, ಶಿಕ್ಷಕರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆ ದೇವರೇ ಗತಿ.
ಇನ್ನು ಇಂಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಇಂಡಿ ಮತ್ತು ಸಿಂದಗಿ ಎರಡು ಕಡೆ ಅಧಿಕಾರದಲ್ಲಿದ್ದಾರೆ. ಮತ್ತು ವಿಜಯಪುರದಲ್ಲಿಯೂ ಕಾರ‍್ಯ ನಿರ್ವಹಿಸುತ್ತಾರೆ. ತುರ್ತುಸೇವೆಗೆಂದು ಯಾರಾದರೂ ಇವರಿಗೆ ಸಂಪರ್ಕ ಮಾಡಿದರೆ ಇಂಡಿಯ ಕರೆಗಳಿಗೆ ಸಿಂದಗಿಯಲ್ಲಿ ಇರುವುದಾಗಿ ಮತ್ತು ಸಿಂದಗಿಯ ಕರೆಗಳಿಗೆ ಇಂಡಿಯಲ್ಲಿ ಇರುವದಾಗಿ ತಿಳಿಸುತ್ತಾರೆ. ಆದರೆ ವಾಸ್ತವದಲ್ಲಿ ಇವರು ವಿಜಯಪುರದಲ್ಲಿ ಇರುತ್ತಾರೆ.
ಕಳೆದ ಎರಡು ವರ್ಷಗಳಿಂದ ಇಂಡಿಯ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿ ಈ ರೀತಿ ಇದೆ. ೨೪ ಗಂಟೆ ಇಂಡಿಯಲ್ಲಿಯೇ ಇದ್ದು ಬಗೆ ಹರಿಯದ ಸಮಸ್ಯೆ ಆಸ್ಪತ್ರೆಯಲ್ಲಿವೆ. ಆದರೆ ಅಧಿಕಾರಿಗಳು ತಮಗೂ ಏನೂ ಸಂಬಂಧವಿಲ್ಲ ವೆಂಬಂತೆ ವರ್ತಿಸುತ್ತಾರೆ.
ಇಂಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಹೆರಿಗೆ ವೈದ್ಯರಿಲ್ಲ. ರಾತ್ರಿ ಹೆರಿಗೆಗೆ ಪಟ್ಟಣದವರು ಮತ್ತು ಗ್ರಾಮಸ್ಥರು ವಿಜಯಪುರಕ್ಕೆ ಅವಲಂಬಿತರಾಗಿದ್ದಾರೆ.
ಕರ್ನಾಟಕದ ನಿಂಬೆ ಅಭಿವೃದ್ದಿ ಮಂಡಳಿ ಮುಖ್ಯ ಕಚೇರಿ ಇಂಡಿಯಲ್ಲಿದೆ. ಆದರೆ ಅದಕ್ಕೆ ರಾಜ್ಯ ಮಟ್ಟದ ವ್ಯವಸ್ಥಾಪಕ ನಿರ್ದೇಶಕರಿದ್ದು ಅವರು ಇಂಡಿಗೆ ಬರುವದು ಅಪರೂಪ.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ತುಂಬಾ ಕಷ್ಟ ಪಟ್ಟು ಇಂಡಿಗೆ ನಿಂಬೆ ಅಬಿವೃದ್ದಿ ಮಂಡಳಿ ತಂದಿದ್ದು, ಅದಕ್ಕೆ ಭೌಗೋಲಿಕ ಸೂಚ್ಯಾಂಕ ಕೊಡಿಸಿದ್ದಾರೆ. ಆದರೆ ನಿಂಬೆ ಅಭಿವೃದ್ದಿ ಕುರಿತು ಯಾವದೇ ರೀತಿಯ ವಿಚಾರ ಸಂಕೀರಣಗಳು ಮತ್ತು ತರಬೇತಿಗಳು ರೈತರಿಗೆ ನೀಡುವ ತರಬೇತಿ ಕೆಲಸ ಆಗುತ್ತಿಲ್ಲ.
ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿದ್ದರೆ, ಸಾರ್ವಜನಿಕ ಕೆಲಸ ಬದಲಿಗೆ ಅಧಿಕಾರಿಗಳು ಸಭೆಯಲ್ಲಿ ಮುಳುಗುತ್ತಾರೆ. ಇದರ ಜೊತೆಗೆ ಹಿರಿಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಡೆದರೆ ಮುಗಿಯಿತು. ಇಡೀ ದಿನ ಇದರಲ್ಲಿಯೇ ಕಾಲ ಕಳೆಯುತ್ತಾರೆ. ಅಧಿಕಾರಿಗಳು ಕಚೇರಿಯಲ್ಲಿದ್ದರೂ ಸಾರ್ವಜನಿಕ ಸೇವೆಗೆ ಲಭ್ಯವಿರುವದಿಲ್ಲ.
“ಕ್ಷೇತ್ರಶಿಕ್ಷಣಾಧಿಕಾರಿಗಳು ಕಚೇರಿಗೆ ಬರದೇ ಇರುವದು ನನ್ನ ಗಮನಕ್ಕೆ ಬಂದಿಲ್ಲ. ಇಂಡಿಯಲ್ಲಿ ಸರಕಾರಿ ಶಿಕ್ಷಕರು, ಮುಖ್ಯೋಪಾದ್ಯಾಯರ ಮತ್ತು ಸಿಬ್ಬಂದಿಯ ಸಭೆ ತೆಗೆದುಕೊಂಡು ಅಭಿಪ್ರಾಯ ಪಡೆಯುತ್ತೇನೆ.”
– ಎನ್.ಎಚ್. ನಾಗೂರ
ಉಪ ನಿರ್ದೇಶಕರು, ವಿಜಯಪುರ

