ಆಲಮಟ್ಟಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪುರಾಣ ಕೈಂಕರ್ಯ
ಆಲಮಟ್ಟಿ: ಆಧ್ಯಾತ್ಮಿಕ ಪುರಾಣ ಪ್ರವಚನದಲ್ಲಿ ಜೋಳದ ರಾಶಿ ಸುಗ್ಗಿಯೊಂದರ ನೈಜ ಚಿತ್ರಣ ಮನೋಜ್ಞವಾಗಿ ಇಲ್ಲಿ ಮೂಡಿಬಂತು. ಭಾವುಕತೆಯಿಂದ ಈ ದೃಶ್ಯ ವೈಭವ ಜನತೆ ಕಣ್ತುಂಬಿಸಿಕೊಂಡು ಭಕ್ತಿನಾದದಲ್ಲಿ ತನ್ಮಯರಾದರು !
ಇಂಥದೊಂದು ಭಕ್ತಿ ಪ್ರಧಾನ ಸನ್ನಿವೇಶಕ್ಕೆ ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದ ಅಂಗಳ ಸಾಕ್ಷಿಯಾಯಿತು !
ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತರಕಾಲ ಹಮ್ಮಿಕೊಂಡಿರುವ ಕಲಬುರಗಿಯ ಶರಣಬಸವೇಶ್ವರರ ಪುರಾಣ ಪ್ರವಚನ ಕಥೆಯಲ್ಲಿ ಬಿಂಬಿತವಾಗಿರುವ ಶರಣಬಸಪ್ಪನ ಜೋಳದ ರಾಶಿ ಕಾರ್ಯಕ್ರಮ ಜರುಗಿತು. ರಾಶಿಯ ನೈಜ ದೃಶ್ಯಾಭಿನಯಗಳು ಮೂಡಿಬಂದವು.
ಪ್ರವಚನಕಾರ ಗಂಗಾವತಿಯ ಶ್ರವಣಕುಮಾರ ಶಾಸ್ತ್ರಿ ಮಾತನಾಡಿ, ಪುರಾಣದ ಕಥೆಯಲ್ಲಿ ಶರಣಬಸವ ಎತ್ತುಗಳನ್ನು ಬಾಡಿಗೆ ತಗೆದುಕೊಂಡು ಬಿತ್ತಲು ಹೊರಡುತ್ತಾರೆ. ಭೂತಾಯಿಯ ಒಡಲಿನಲ್ಲಿ ಕೇವಲ ಮೂರು ಕಾಳುಗಳನ್ನು ಬಿತ್ತಲಿಕ್ಕೆ ಆರಂಭಿಸುತ್ತಾನೆ.ಅಗ ಊರಿನ ಜನರೆಲ್ಲ ತಿಪ್ಪಿಯೊಳಗ ಹಾಕುವಂಥ ಕಾಳಗಳನ್ನು ಬಿತ್ತಿದೆಲ್ಲ ಎಂದು ಅವಹೇಳನ ಮಾಡುತ್ತಾರೆ. ಆದರೆ ಆ ಮೂರು ಕಾಳುಗಳೇ ಅಮೂಲ್ಯ, ಅದ್ಭುತ ಕಾಳುಗಳಾಗಿ ರೂಪಗೊಳ್ಳುತ್ತವೆ. ಶರಣಬಸಪ್ಪನ ಪುರಾಣದಲ್ಲಿನ ಬಿತ್ತನೆ ಕಾಳುಗಳು ಬದುಕಿನ ನೈಜ ಕಾಳುಗಳಾಗಿವೆ. ಒಂದು ಕಾಳು ದುಡಿದಂಥ ರೈತನಿಗೆ,ಇನ್ನೊಂದು ಪಶುಪಕ್ಷಿ-ಪ್ರಾಣಿಗಳಿಗಾಗಿ ಮತ್ತೊಂದು ಧಾನ ಧರ್ಮಗಳಿಗಾಗಿ,ಜಂಗಮರಿಗಾಗಿ ಹೊತ್ತು ಬಿತ್ತಿರುವ ಕಾಳುಗಳು ಎಂದು ಕಲಬುರಗಿ ಶರಣಬಸವನ ಜೋಳದ ರಾಶಿ ಕಥಾ ಹಂದರವನ್ನು ಹೇಳಿದರು.
ಕೇವಲ ಮೂರು ಜೋಳದ ಕಾಳಗಳನ್ನು ಬಿತ್ತಿ ಅಪಾರ ರಾಶಿ ಮಾಡಿದ ಬಸವನ ಕಾಯಕಪ್ರಜ್ಞೆ ಮನ,ಮನೆ,ಅಂಕಣಗಳು ತುಂಬಿದವು. ಅರ್ಥಾತ ಪಶು,ಪಕ್ಷಿ,ಪ್ರಾಣಿಗಳಿಗೂ ದಾನ ಮಾಡಿದವರು,ದಾನಧರ್ಮ, ಭಕ್ತಿಭಾವದ ಆಧ್ಯಾತ್ಮಿಕ ಪ್ರವೃತ್ತಿಯಲ್ಲಿರುವರ ಮನೆತನ,ಮನೆಯಲ್ಲಿ ಅನ್ನಪೂರ್ಣೇಶ್ವರಿ ಸದಾ ನೆಲೆಸಿರುತ್ತಾಳೆ ಎಂಬುದನ್ನು ಶರಣಬಸವ ತೋರಿಸಿಕೊಟ್ಟಿದ್ದಾರೆ ಎಂದರು.
ಬಸವರಾಶಿ ಕಾರ್ಯಕ್ರಮದಲ್ಲಿ ಮೂಡಿಬಂದ ದೃಷ್ಟಾಂತಗಳಲ್ಲಿ ವಂದಾಲ ಗ್ರಾಮದ ಹಲ ರೈತರು,ಶರಣ ಸದ್ಭಕ್ತರು ನಟಿಸಿದ ಪಾತ್ರಾಭಿನಯ ನೈಜರೂಪದ ಅನುಭವ ನೀಡಿತು. ರಾಮಲಿಂಗೇಶ್ವರ ಕಲಾಬಳಗದ ಜಗನ್ನಾಥ ಬಡಿಗೇರ, ಮೌನೇಶಕುಮಾರ ಮತ್ತಿತರ ನೇತೃತ್ವದಲ್ಲಿ ಜೋಳದ ರಾಶಿ ಕಾರ್ಯಕ್ರಮ ಜರುಗಿತು. ಕಲಬುರಗಿ ಶರಣ ಬಸವೇಶ್ವರ ಹೊಲವನ್ನು ಹಸನ ಮಾಡಿ ರಾಶಿ ಮಾಡುತ್ತಿದ್ದರು ಎಂಬುದಕ್ಕೆ ಇದೊಂದು ನಿರ್ದಶನ ಪ್ರವಚನದಲ್ಲಿ ಬರುತ್ತದೆ.ಆ ಪ್ರಯುಕ್ತ ವಂದಾಲದಿಂದ ಆಗಮಿಸಿದ್ದ ರೈತ ಸದ್ಭಕ್ತರು ರಾಶಿ ಒಡೆದು ಹಸನ ಮಾಡುವ,ಕಣಕಿ ತೆಗೆದು ಜೋಳದ ಪೊರೆಯನ್ನು ಸಂಗ್ರಹಿಸುವ ಕಾರ್ಯಕ್ರಮ ನೆರವೇರಿಸಿದರು. ರಾಶಿ ಹಿನ್ನಲೆಯ ಜಾನಪದ ಸೊಗಡಿನ ಹಾಡುಗಳನ್ನು ಹಾಡಿ ಹಿಂದಿನ ರಾಶಿ ಗತ ವೈಭವವನ್ನು ಸಾರಿದರು.ಅಭೂತಮಯವಾಗಿ ನೆನಪಿಸಿದರು.
ಮುತ್ತುರಾಜ ಹಿರೇಮಠ, ಶೇಖರಪ್ಪ ಬೂದಿಹಾಳ, ಸಜ್ಜನ ಗೂಗಿಹಾಳ,ಬಸವರಾಜ ಗುಂಗಿ,ಸುದೀಪ್ ಪ್ರಜ್ವಲ್ ಇದ್ದರು. ರಾಶಿ ಹಿನ್ನಲೆಯ ಜಾನಪದ ಹಾಡುಗಳು ಹಾಡಿದರು.
ರಾಶಿ ಕಾರ್ಯಕ್ರಮಕ್ಕೆ ಆಲಮಟ್ಟಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿನ ಶರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಬಸವನಿಷ್ಟೆ ಭಕ್ತಿಭಾವ ಸಾಕ್ಷೀಕರಿಸಿದರು. ಶಿವಣ್ಣ ನುಗ್ಲಿ ರಾಶಿ ಕಾರ್ಯಕ್ರಮದ ಅಭಿಪ್ರಾಯ ಹಂಚಿಕೊಂಡರು. ಸಕಲ ಭಕ್ತರಿಗೆ ಸಂತೋಷ ಮರಡಿ ಕಿಚ್ಚಡಿಬಾನದ ಪ್ರಸಾದ ಸೇವೆ ಮಾಡಿದರು.
ರಾಮಲಿಂಗೇಶ್ವರ ದೇವಸ್ಥಾನ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಯಶವಂತ ಮರಡಿ,ಗೌರವಾಧ್ಯಕ್ಷ ಪ್ರಭುಸ್ವಾಮಿ ಹೇಮಗಿರಿಮಠ, ಉಪಾಧ್ಯಕ್ಷ ಅಡಿವೆಪ್ಪ ವಕ್ರ, ಖಜಾಂಚಿ ಮಂಜುನಾಥ ಆಲಮಟ್ಟಿ, ಸದಸ್ಯರಾದ ವೆಂಕಟೇಶ ರಾಠೋಡ, ಚಂದ್ರಶೇಖರ ಪಳನಿ ಪಾಟೀಲ, ಒಡೆಯರ ಮೊದಲಾದವರು ಸಹಕರಿಸಿದರು. ಈ ಪ್ರಮುಖ ಶ್ರದ್ಧಾಳುಗಳ ಮುತುವರ್ಜಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಧ್ಯಾತ್ಮಿಕ ಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಶ್ರದ್ಧೆಯಿಂದ ಸಾಗುತ್ತಿದೆ. ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಸ್ವಾಗತಿಸಿದರು. ನಿವೃತ್ತ ಇಂಜಿನಿಯರ್ ಅಯ್ಯಪ್ಪ ಬಿಲವಾಡ ವಂದಿಸಿದರು.

