ಆಲಮಟ್ಟಿ: ನಿಡಗುಂದಿ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ನಿಡಗುಂದಿ ಬಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸಮೀಪದ ಚಿಮ್ಮಲಗಿ ಭಾಗ-೨ ಸರಕಾರಿ ಪ್ರೌಢಶಾಲಾ ಮಕ್ಕಳು ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತರಾಗಿ ಸಾಧನೆ ಮೆರೆದಿದ್ದಾರೆ.
ಶಾಲೆಯ ಬಾಲಕ-ಬಾಲಕಿಯರು ಹಲ ಸ್ಪರ್ಧೆಗಳಲ್ಲಿ ಅಮೋಘ ಗೆಲುವು ಸಾಧಿಸಿ ಮಿಂಚಿದ್ದಾರೆ. ಬಾಲಕ ಹಾಗೂ ಬಾಲಕಿಯರ ವಿಭಾಗದ ಕಬಡ್ಡಿ ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಚಿಮ್ಮಲಗಿ ಶಾಲಾ ತಂಡ ಜಯಭೇರಿ ಬಾರಿಸಿ ಗೆಲುವಿನ ನಗೆಯೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಬಾಲಕಿಯರ ತಂಡದ ನಾಯಕಿ ಸಂಗೀತಾ ಹಳಕಟ್ಟಿ ಹಾಗೂ ಬಾಲಕರ ತಂಡದ ನಾಯಕ ಅಭಿಷೇಕ ಜಗತಾಪ ಅವರ ಮುಂದಾಳತ್ವದಲ್ಲಿ ಕ್ರೀಡಾಪಟುಗಳು ಸಾಂಘಿಕ ಆಟದ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.
ಬಾಲಕಿಯರ ವಿಭಾಗದ ೩೦೦೦ ಮೀ.ಓಟದಲ್ಲಿ ಲಕ್ಷ್ಮಿ ಲಮಾಣಿ ಪ್ರಥಮ ಸ್ಥಾನ ಪಡೆದರೆ ಐಶ್ವರ್ಯ ಲಮಾಣಿ ದ್ವೀತಿಯ ಸ್ಥಾನ ಪಡೆದು ಮಿಂಚಿದ್ದಾರೆ. ೧೫೦೦ ಮೀ.ಓಟದಲ್ಲಿ ಸ್ನೇಹಾ ಸಾತಿಹಾಳ ದ್ವೀತಿಯ, ೩೦೦೦ ಮೀ.ನಡಿಗೆಯಲ್ಲಿ ಜಾನಮ್ಮ ಚಿನಗೊಂಡ ದ್ವೀತಿಯ, ೪೦೦ ಮೀ.ಓಟದಲ್ಲಿ ಸುಶೀಲಾಬಾಯಿ ಲಮಾಣಿ ದ್ವೀತಿಯ ಸ್ಥಾನ ಪಡೆದು ಮಿನುಗಿದ್ದಾರೆ.
ಬಾಲಕರ ವಿಭಾಗದ ೩೦೦೦ ಮೀ.ಹಾಗೂ ೮೦೦ ಮೀ.ಓಟದ ಸ್ಪರ್ಧೆಯಲ್ಲಿ ಅಭಿಷೇಕ ಜಗತಾಪ ಪ್ರಥಮ ಸ್ಥಾನದೊಂದಿಗೆ ಗೆಲುವು ಸಾಧಿಸಿ ಕೂಟದಲ್ಲಿ ಮಿಂಚಿದ್ದಾರೆ. ೩೦೦೦ ಮೀ.ಓಟದಲ್ಲಿ ಲಕ್ಷ್ಮಣ ಸಿದ್ದನಾಥ ದ್ವೀತಿಯ,೧೫೦೦ ಮೀ.ಓಟದಲ್ಲಿ ತೃತೀಯ ಸ್ಥಾನ ಪಡೆದರೆ ತ್ರಿವಿಧ ಜಿಗಿತದಲ್ಲಿ ರಾಜು ಮುತ್ತಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.ಇತ ೨೦೦ ಮೀ.ಹಾಗೂ೧೦೦ ಮೀ.ಓಟದಲ್ಲಿಯೂ ದ್ವೀತಿಯ ಸ್ಥಾನ ಗಳಿಸಿ ಮಿಂಚಿದ್ದಾನೆ. ೫೦೦೦ ಮೀ.ನಡಿಗೆಯಲ್ಲಿ ಆಕಾಶ ಸಿದ್ದನಾಥ ದ್ವೀತಿಯ, ಉದ್ದ ಜಿಗಿತದ ಸ್ಪರ್ಧೆಯಲ್ಲಿ ಪ್ರಜ್ವಲ್ ಅಳ್ಳಿಚಂಡಿ ದ್ವೀತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ವಲಯ ಮಟ್ಟದ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಹಾಗೂ ಮಕ್ಕಳಿಗೆ ಉತ್ತಮ ತರಬೇತಿಗೊಳಿಸಿ ಕ್ರೀಡಾಕೂಟದಲ್ಲಿ ಮಿನುಗುವಂತೆ ಮಾಡಿದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಬಳಬಟ್ಟಿ ಅವರಿಗೆ ಶಾಲೆ ಮುಖ್ಯ ಗುರುಮಾತೆ ಜ್ಯೋತಿ ಹೊಸಮನಿ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

