– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ)ದೇವರ ಐತಿಹಾಸಿಕ ಜಾತ್ರಾಮಹೋತ್ಸವ ಆ.೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ನಡೆಯುವ ಹಿನ್ನೆಲೆಯಲ್ಲಿ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲೆಯ ಪಕ್ಕದಲ್ಲಿರುವ ಸ್ಥಳೀಯ ಗಣ್ಯ ವ್ಯಾಪಾರಸ್ಥ ಅನಿಲ(ಭರತು) ಅಗರವಾಲ ಅವರ ಜಮೀನಿನಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ವಿವಿಧ ಮಳಿಗೆಗಳ ವ್ಯಾಪಾರಸ್ಥರು ಗುರುವಾರ ತಮ್ಮ ತಮ್ಮ ಮಳಿಗೆಗಳನ್ನು ಹಾಕಲು ಭರದಿಂದ ಸಿದ್ಧತೆ ಕೈಗೊಂಡಿದ್ದು ಕಂಡುಬಂದಿತ್ತು.
ಈ ಜಾಗೆಯಲ್ಲಿ ಮಳಿಗೆಗಳಿಗೆ ಜನರು ಬರಲು ವಿವಿಧೆಡೆ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜಮೀನಿನಲ್ಲಿ ಗರಸು ಹಾಕಿ ರಸ್ತೆ ಮಾಡಲಾಗಿದೆ. ಇದರಿಂದಾಗಿ ಮಳೆ ಬಂದರೂ ರಾಡಿಯಾಗುವ ಪ್ರಮೇಯ ಇರುವುದಿಲ್ಲ. ಸುವ್ಯವಸ್ಥಿತ ಮಳಿಗೆಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ.
ಬಸವೇಶ್ವರ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಉತ್ಸವ ಸಮಿತಿ ಪದಾಧಿಕಾರಿಗಳು ಜಾತ್ರೆಗೆ ಹಾಕಲಾಗುವ ತಾತ್ಕಲಿಕ ಮಳಿಗೆಗಳಿಗೆ ಭರತು ಅಗರವಾಲ ಜಮೀನಿನಲ್ಲಿ ಮಳಿಗೆ ಹಾಕುವವರಿಗೆ ಹಂಚಿಕೆ ಮಾಡಿದ್ದರಿಂದಾಗಿ ತಮ್ಮ ತಮ್ಮ ಮಳಿಗೆಗಳನ್ನು ಹಾಕುವ ಸಿದ್ಧತೆ ಕೈಗೊಂಡಿದ್ದಾರೆ. ಮಧ್ಯಾನ್ಹ, ಸಂಜೆ ಬಂದ ಮಳೆಯು ಮಳಿಗೆ ಹಾಕಲು ಅವಕಾಶ ನೀಡಲಿಲ್ಲ. ಮಳೆ ವಿರಾಮ ನೀಡಿದ ನಂತರ ಮಳಿಗೆ ಹಾಕುವ ಕಾರ್ಯದಲ್ಲಿ ತೊಡಗಿಕೊಂಡರು.
ಪ್ರತಿ ವರ್ಷ ಬಸವೇಶ್ವರ ಜಾತ್ರೆಯ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿ ಜಾತ್ರೆಯ ಮಳಿಗೆಗಳನ್ನು ಹಾಕಲಾಗುತ್ತಿತ್ತು. ಇದರಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿತ್ತು. ೨೦೨೩ ರಲ್ಲಿ ಗಂಗಾಧರ ಕುಂಟೋಜಿ ಅವರು ಹಳ್ಳದ ಪಕ್ಕದಲ್ಲಿರುವ ತಮ್ಮ ಜಾಗೆಯಲ್ಲಿ ಜಾತ್ರೆಯ ಮಳಿಗೆಗಳನ್ನು ಹಾಕಲು ಉಚಿತವಾಗಿ ಅವಕಾಶ ನೀಡಿದ್ದರು. ಆಗ ರಸ್ತೆ ಸಂಚಾರಕ್ಕೆ ಅಷ್ಟಾಗಿ ತೊಂದರೆಯಾಗಿರಲಿಲ್ಲ. ಈ ಸಲ ಅನಿಲ ಅಗರವಾಲ ಅವರು ದೇವಾಲಯದ ಪಕ್ಕದಲ್ಲಿಯೇ ತಮ್ಮ ಜಾಗೆ ನೀಡಿದ್ದರಿಂದ ಈ ಸಲವೂ ಸಂಚಾರಕ್ಕೆ ಅಷ್ಟಾಗಿ ತೊಂದರೆಯಾಗುವುದಿಲ್ಲ. ಜಾತ್ರೆಯ ಮಳಿಗೆಗಳನ್ನು ಹಾಕಲು ಅನಿಲ ಅಗರವಾಲ ಅವರು ಉಚಿತವಾಗಿ ಜಾಗೆಯನ್ನು ನೀಡಿದ್ದು ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿಗೆ ಸಂತಸ ತಂದಿದೆ.
ಜಾತ್ರೆಯಂಗವಾಗಿ ವಿವಿಧ ತೂಗು ತೊಟ್ಟಿಲು ಸೇರಿದಂತೆ ವಿವಿಧ ಮನರಂಜನಾ ಸಾಮಗ್ರಿಗಳನ್ನು ಹಾಕುವ ಕಾರ್ಯ ಭರದಿಂದ ನಡೆದಿದೆ. ಜಾತ್ರೆಯಂಗವಾಗಿ ಬಳೆ ಅಂಗಡಿ, ಸ್ಟೇಶನರಿ ಅಂಗಡಿ, ಗೊಂಬೆ ಅಂಗಡಿ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಮಿಠಾಯಿ ಅಂಗಡಿ, ವಿವಿಧ ತಿನಿಸುಗಳ ಅಂಗಡಿ, ಕಬ್ಬಿನಹಾಲು ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳನ್ನು ಹಾಕಲು ಸಂಬಂಧಿಸಿದ ಮಳಿಗೆಯ ವ್ಯಾಪಾರಸ್ಥರು ಅಗತ್ಯ ಸಿದ್ಧತೆ ಭರದಿಂದ ಮಾಡಿಕೊಳ್ಳುತ್ತಿದ್ದಾರೆ. ಮಳಿಗೆಗಳನ್ನು ಹಾಕಲು ಸ್ಥಳೀಯ ವ್ಯಾಪಾರಸ್ಥರು ಸೇರಿದಂತೆ ಜಿಲ್ಲೆ, ವಿವಿಧ ಜಿಲ್ಲೆ, ಆಂದ್ರಪ್ರದೇಶ, ಬಾಂಬೆ, ಉತ್ತರಪ್ರದೇಶ, ದೆಹಲಿ ಸೇರಿದಂತೆ ವಿವಿಧೆಡೆ ವ್ಯಾಪಾರಸ್ಥರು ಬಂದಿದ್ದಾರೆ.
ಕಳೆದ ಹತ್ತು ವರ್ಷದಿಂದ ಈ ಜಾತ್ರೆಯಲ್ಲಿ ಗೊಂಬೆ ಅಂಗಡಿ ಹಾಕಲಾಗುತ್ತಿದೆ.ಪ್ರತಿ ವರ್ಷ ವಿವಿಧೆಡೆ ಅಂಗಡಿಯನ್ನು ಹಾಕಲು ಇಲ್ಲಿನ ಸಮಿತಿ ನೀಡುತ್ತಿದೆ. ಈ ಸಲ ಉತ್ತಮವಾದ ಜಾಗೆಯಲ್ಲಿ ನೀಡಲಾಗಿದೆ. ಪ್ರತಿವರ್ಷ ಇದೇ ಜಾಗೆಯಲ್ಲಿ ನೀಡಿದರೆ ಉತ್ತಮ ಎಂದು ಗೊಂಬೆ ಅಂಗಡಿಯನ್ನು ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಉತ್ತರಪ್ರದೇಶದ ವ್ಯಾಪಾರಿ ಜಮೀಲ ಬಾಯಿ ಅವರು ಹೇಳಿದರು.
ನಾವು ನಮ್ಮ ತಂದೆ ದಾವಲಸಾಬ ಅವರ ಕಾಲದಿಂದಲೂ ಜಾತ್ರೆಯಲ್ಲಿ ಬಳೆ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಕಳೆದ ೩೦ ವರ್ಷದಿಂದಲೂ ನಮ್ಮ ಮನೆತನ ಈ ಜಾತ್ರೆಯಲ್ಲಿ ಬಳೆ ವ್ಯಾಪಾರ ಮಾಡಿಕೊಂಡು ಬಂದಿದೆ. ಈ ಸಲ ಆಯಾ ವ್ಯಾಪಾರಕ್ಕೆ ಅನುಗುಣವಾಗಿ ಆಯಾ ಮಳಿಗೆ ವ್ಯಾಪಾರಿಗಳಿಗೆ ಜಾತ್ರಾ ಸಮಿತಿಯವರು ಜಾಗೆಯನ್ನು ನೀಡಿದ್ದಾರೆ. ಬೇರೆ ಜಾತ್ರೆಯಲ್ಲಿ ಮಳಿಗೆಗಳನ್ನು ಹಾಕಲು ಇಂತಿಷ್ಟು ಎಂದು ಹಣ ನಿಗದಿ ಮಾಡುತ್ತಾರೆ. ಆದರೆ ಈ ಜಾತ್ರೆಯಲ್ಲಿ ಹಣ ನಿಗದಿ ಮಾಡುವುದಿಲ್ಲ. ಜಾತ್ರೆಗೆ ದೇಣಿಗೆ ಮಾತ್ರ ಪಡೆದುಕೊಳ್ಳುತ್ತಾರೆ. ಈ ಸಲ ಬಹಳ ಅಂಗಡಿಗಳು ಜಾತ್ರೆಗೆ ಬಂದಿವೆ. ವ್ಯಾಪಾರ ಯಾವ ರೀತಿಯಾಗುತ್ತದೆ ಎಂದು ಕಾಯ್ದು ನೋಡಬೇಕು. ಮಳೆ ವಿರಾಮ ನೀಡಿದರೆ ವ್ಯಾಪಾರ ಉತ್ತಮವಾಗಬಹುದು ಎಂದು ಬಳೆ ಅಂಗಡಿ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಇಸ್ಮಾಯಿಲ್ ತಾಂಬೋಳಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

