ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯಲ್ಲಿನ ವಾರ್ಡ ಸಂ.೧ ರಿಂದ ೩೫ ರವರೆಗಿನ ಖಾಸಗಿ ಮಾಲೀಕತ್ವದ ಖಾಲಿ ನಿವೇಶನಗಳ ಮಾಲೀಕರು-ಸಾರ್ವಜನಿಕರು ತಮ್ಮ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಖಾಲಿ ನಿವೇಶನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ರ ಕಲಂ ೨೫೬, ೨೫೭, ೩೩೨, ೩೩೩, ೩೩೪ ಮತ್ತು ೩೩೫ರಡಿಯಲ್ಲಿ ಖಾಲಿ ನಿವೇಶನಗಳಲ್ಲಿ ಕಸದ ರಾಶಿ, ಕಟ್ಟಡ ಭಗ್ನಾವಶೇಷಗಳನ್ನು ಸುರಿಯುವುದರಿಂದ ನಿವೇಶನಗಳಲ್ಲಿ ಕಸ ಗಿಡಕಂಟಿ ಬೆಳೆದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುತ್ತದೆ ಹಾಗೂ ಸ್ವಚ್ಛ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಈ ಕುರಿತು ಪಾಲಿಕೆಯಿಂದ ಹಲವು ಬಾರಿ ನಿವೇಶನ ಮಾಲೀಕರಿಗೆ ಸೂಚನೆ ನೀಡಲಾಗಿದ್ದರೂ ಸಹ ಆದೇಶ ಪಾಲನೆ ಮಾಡದೇ, ಶುಚಿತ್ವ ಕಾಪಾಡಿಕೊಳ್ಳದಿರುವ ಕುರಿತು ಸಾಕಷ್ಟು ದೂರುಗಳು ಪಾಲಿಕೆಗೆ ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಪಾಲಿಕೆ ವತಿಯಿಂದ ವಾರ್ಡವಾರು ಮುಖ್ಯ ರಸ್ತೆಗಳ ಸ್ವಚ್ಛತೆ, ವೃತ್ತಗಳ ಸ್ವಚ್ಛತೆ, ಹಾಗೂ ವಾರ್ಡಗಳಲ್ಲಿನ ಕಸದ ರಾಶಿಗಳನ್ನು ಸ್ವಚ್ಛಗೊಳಿಸುವ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನಗರದ ಸಾರ್ವಜನಿಕರು ವರ್ತಕರು, ರಸ್ತೆ ಬದಿಗಳಲ್ಲಿ ತಮಗೆ ಸಂಬಂಧಿಸಿದ ವಸ್ತುಗಳನ್ನು ತೆರವುಗೊಳಿಸಬೇಕು ಹಾಗೂ ಸುತ್ತಮುತ್ತಲಿನನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತಪ್ಪಿದಲ್ಲಿ ಸದರಿ ವಸ್ತುಗಳನ್ನು ಅನಾವಶ್ಯಕ ವಸ್ತು ಎಂದು ಪರಿಗಣಿಸಿ ಪಾಲಿಕೆ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
