ರಾಜ್ಯಪಾಲರನ್ನು ಹಿಂಪಡೆದುಕೊಳ್ಳಲು ರಾಷ್ಟ್ರಪತಿಗಳಿಗೆ ಮನವಿ | ಪ್ರಧಾನಿ ಮೋದಿ, ಸಚಿವ ಕುಮಾರಸ್ವಾಮಿ ಪ್ರತಿಕೃತಿ ದಹನ
ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ವಿನಾಕಾರಣ ರಾಜ್ಯಪಾಲರು ಪ್ರಾಸಿಕ್ಯೂಷನ್ ತನಿಖೆಗೆ ಆದೇಶಿಸಿರುವ ಕ್ರಮವನ್ನು ಪ್ರಬಲವಾಗಿ ವಿರೋಧಿಸಿರುವ ಕಾಂಗ್ರೆಸ ಪಕ್ಷದ ಕಾರ್ಯಕರ್ತರು ವಿಜಯಪುರದಲ್ಲಿ ಸಚಿವ ಡಾ. ಎಂ.ಬಿ. ಪಾಟೀಲ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮುದ್ದೇಬಿಹಾಳ, ಸಿಂದಗಿ, ಇಂಡಿ ಸೇರಿದಂತೆ ಎಲ್ಲ ತಾಲೂಕುಗಳಿಂದ ಸರಿಸುಮಾರು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಜಮಾಯಿಸಿ ಸಿದ್ದರಾಮಯ್ಯನವರೇ ನಾವು ನಿಮ್ಮ ಜೊತೆ ಇದ್ದೇವೆ..' ಎಂಬ ಸಂದೇಶವನ್ನು ರವಾನಿಸಿದರು. ಅಹಿಂದ ಒಕ್ಕೂಟದ ಮುಖಂಡರು ಸಹ ಈ ಪ್ರತಿಭಟನೆಗೆ ಸಾಥ್ ನೀಡಿದರು. ಸಂವಿಧಾನ ವಿರೋಧಿ ನಡೆ ಅನುಸರಿಸಿದ ರಾಜ್ಯಪಾಲರ ಕ್ರಮ ಖಂಡನಾರ್ಹ, ರಾಜ್ಯಪಾಲ ಹಠಾವೋ.., `ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಧಿಕ್ಕಾರ..’ ಎಂಬಿತ್ಯಾದಿ ಘೋಷಣೆಗಳು ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಮೊಳಗಿದವು.
ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಬಾವುಟ, ಶಲ್ಯ ಧರಿಸಿ, ಅನೇಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾದರೆ, ಇನ್ನೂ ಕೆಲವರು ಹೋರಾಟದ ಗೀತೆಗಳನ್ನು ಹಾಡುತ್ತಾ ಹೆಜ್ಜೆ ಹಾಕಿದರು. ಶಾಸಕರು ಕೈಗೆ ಬಟ್ಟೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ನಂತರ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು.
ಅಲ್ಲಿ ಸಚಿವ ಡಾ.ಎಂ.ಬಿ. ಪಾಟೀಲ ರಾಜ್ಯಪಾಲರ ಸಂವಿಧಾನ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಕಾಂಗ್ರೆಸ್ ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕರಾದ ಡಾ.ಮಕ್ಬೂಲ್ ಬಾಗವಾನ, ಪ್ರೊ.ರಾಜು ಆಲಗೂರ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಅಹಿಂದ ಧುರೀಣ ಸೋಮನಾಥ ಕಳ್ಳೀಮನಿ, ಅಬ್ದುಲ್ ರಜಾಕ ಹೊರ್ತಿ, ಸುರೇಶ ಗೊಣಸಗಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡರಾದ ರಫೀಕ್‌ಅಹ್ಮದ್ ಖಾಣೆ, ಷಹನವಾಜ್ ಮುಲ್ಲಾ, ಜಮೀರ್ ಭಕ್ಷಿ, ಪೀರಾ ಜಮಖಂಡಿ, ಆರತಿ ಶಹಾಪೂರ, ಫಯಾಜ್ ಕಲಾದಗಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರತಿಕೃತಿ ದಹಿಸಿ ಆಕ್ರೋಶ
ಕಾಂಗ್ರೆಸ್ ಸಾವಿರಾರು ಕಾರ್ಯಕರ್ತರು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ರ‍್ಯಾಲಿಯುದ್ದಕ್ಕೂ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಷಹಾ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ನಡೆ ಸಂವಿಧಾನಿಕ ವಿರೋಧಿಯಾಗಿದ್ದು, ಈ ವಿಷಯದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಸುದೀರ್ಘವಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕಾಂಗ್ರೆಸ್ ನಾಯಕರು ಸಲ್ಲಿಸಿದರು.

