ತಿಕೋಟಾ ಉಪನೊಂದಣಾಧಿಕಾರಿ ಕಚೇರಿ ಕಾರ್ಯಾರಂಭ | ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಚಾಲನೆ
ವಿಜಯಪುರ: ವಿವಿಧ ಸಭೆ-ಸಮಾರಂಭಗಳಲ್ಲಿ ಅನಗತ್ಯ ಹಾರ್-ತುರಾಯಿ ಖರ್ಚು ಮಾಡದೇ ಬದಲಿಗೆ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ನೋಟ್‌ಬುಕ್ ವಿತರಣೆ ಮಾಡುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಭಿಪ್ರಾಯಿಸಿದರು.
ಜಿಲ್ಲೆಯ ತಿಕೋಟಾದಲ್ಲಿ ತಾಲೂಕಾ ಸೌಧದಲ್ಲಿನ ಉಪನೊಂದಣಾದಿಕಾರಿ ಕಚೇರಿ ಕಾರ್ಯಾರಂಭ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರವನ್ನು ಬುಧವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯಾವುದೇ ಸಭೆ-ಸಮಾರಂಭಗಳಲ್ಲಿ ನೋಟ್‌ಪುಸ್ತಕ ನೀಡುವ ಪದ್ಧತಿ ರೂಢಿಸಿಕೊಂಡಲ್ಲಿ ಇದರಿಂದ ವಿದ್ಯಾರ್ಥಿಗಳಿಗೆ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಹಾರ ತುರಾಯಿಗಳಿಗೆ ವ್ಯಯಿಸುವ ವೆಚ್ಚವನ್ನು ಶೈಕ್ಷಣಿಕ ಗುಣಮಟ್ಟಕ್ಕೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ನೋಟ್‌ಪುಸ್ತಕ ಅಥವಾ ಪುಸ್ತಕ ಒದಗಿಸುವ ಮೂಲಕ ಬಡ ಮಕ್ಕಳಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಶಿಕ್ಷಣಕ್ಕೆ ಒತ್ತು ನೀಡಿ ಶೈಕ್ಷಣಿಕ ಪ್ರಗತಿಯಲ್ಲಿ ವಿಜಯಪುರ ಜಿಲ್ಲೆ ಶೈಕ್ಷಣಿಕ ಪಥದಲ್ಲಿ ಮುಂಚೂಣಿಯಾಗಿ, ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಿಎಸ್‌ಆರ್ ಅನುದಾನದಡಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಲಾಗುವುದು. ಸ್ಮಾರ್ಟ್ ಕ್ಲಾಸ್ ಆರಂಭಿಸುವ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಿಎಸ್‌ಆರ್ ಅನುದಾನದಡಿ ಶಾಲಾ ಕಟ್ಟಡಗಳ ದುರಸ್ಥಿ, ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ ಅವರು, ಪ್ರಥಮ ಹಂತದಲ್ಲಿ ಬಬಲೇಶ್ವರ ಹಾಗೂ ತಿಕೋಟಾದಲ್ಲಿ ಒದಗಿಸಲಾಗಿದ್ದು, ಮುಂಬರುವ ಒಂದು ವರ್ಷದೊಳಗೆ ಜಿಲ್ಲೆಯಾದ್ಯಂತ ಇರುವ ಶಾಲೆಗಳಿಗೆ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ತಿಕೋಟಾ ಭಾಗದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಸ್ಥಾಪನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ರೈತರು ತಮ್ಮ ಹೊಲದಲ್ಲಿನ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಹೋಗಿ ದುರಸ್ತಿ ಮಾಡಿಕೊಳ್ಳುವುದರಿಂದ ಅನಾವಶ್ಯಕವಾಗಿ ಸಮಯ ವ್ಯರ್ಥವಾಗುತ್ತಿತ್ತು. ಈ ಭಾಗದಲ್ಲಿ ದುರಸ್ತಿ ಕೇಂದ್ರ ಆರಂಭವಾಗಿರುವುದರಿಂದ ರೈತರ ಸಮಯವೂ ಉಳಿತಾಯವಾಗಿ ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆತು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈಗಾಗಲೇ ನೀರಾವರಿಗೆ ಆದ್ಯತೆ ನೀಡಲಾಗಿದೆ. ನೀರಾವರಿಗೆ ನೀಡಿದ ಆದ್ಯತೆಯನ್ನು ಈ ಭಾಗದಲ್ಲಿ ವಿದ್ಯತ್ ಪೂರೈಕೆಗೆ ನೀಡಲಾಗುತ್ತಿದೆ. ವಿದ್ಯುತ್ ಪೂರೈಕೆ ಮುಖ್ಯವಾಗಿರುವುದರಿಂದ ವಿಶೇಷ ಕಾಳಜಿ ವಹಿಸಿ, ನೀರಿನೊಂದಿಗೆ ವಿದ್ಯುತ್ ಒದಗಿಸುವ ಮೂಲಕ ರೈತರ ಬಾಳು ಹಸನಾಗಿಸಲು ಪ್ರಯತ್ನಿಸಲಾಗಿದೆ. ೨೦೧೩-೨೦೧೮ರ ಅವಧಿಯಲ್ಲಿ ನೀರಾವರಿಗಾಗಿ ೩೬೦೦ ಕೋಟಿ ರೂ. ವೆಚ್ಚ ಮಾಡಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿಯನ್ನರಿತು ರೈತರು ಸಾರ್ವಜನಿಕರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ತಿಕೋಟಾ ಮತ್ತು ಬಬಲೇಶ್ವರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಒಂದೇ ತಾಲೂಕಿನಲ್ಲಿ ಎರಡು ಮಿನಿ ವಿಧಾನಸೌಧ ನಿರ್ಮಾಣ ಮಾಡಿರುವ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಇದೀಗ ವಿಜಯಪುರ ಜಿಲ್ಲೆಯಲ್ಲಿಯೇ ತಾಲೂಕಾ ಮಟ್ಟದಲ್ಲಿ ಪ್ರಪ್ರಥಮವಾಗಿ ಉಪನೊಂದಣಾಧಿಕಾರಿಗಳ ಕಚೇರಿ ಕಾರ್ಯಾರಂಭಗೊಳಿಸಿದ್ದು, ಇದರಿಂದ ರೈತರ, ಆಸ್ತಿ ಖರೀದಿ, ಆಸ್ತಿ ನೊಂದಣಿಗೆ ಅನುಕೂಲವಾಗಿ ಜಿಲ್ಲಾ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿ ರೈತರ ವಿವಿಧ ಕೆಲಸ ಕಾರ್ಯಗಳು ತಾಲೂಕಾ ಕೇಂದ್ರದಲ್ಲಿಯೇ ಆಗುವುದರಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ಸಮಯ ಉಳಿತಾಯವಾಗಿ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ಭೂದಾಖಲೆಗಳ ಕಚೇರಿಗಳನ್ನು ಸಹ ಕಾರ್ಯಾರಂಭ ಮಾಡಿ ಅನುಕೂಲ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತಿಕೋಟಾ ತಹಶೀಲ್ದಾರ ಪ್ರಶಾಂತ ಚನಗೊಂಡ, ಜಿಲ್ಲಾ ನೊಂದಣಾಧಿಕಾರಿ ಶ್ರೀಮತಿ ದ್ರಾಕ್ಷಾಯಿಣಿ ಮಠ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ಧಪ್ಪ ಬಿಂಜಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ, ತಿಕೋಟಾ ಉಪನೊಂದಣಾಧಿಕಾರಿ ಸುಷ್ಮಾ ಬಡಿಗೇರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ ದೇಶಮುಖ ಸೇರಿದಂತೆ ಇತರರು ಉಪಸ್ಥಿತರಿದ್ದರು.

