ಸಲಹೆ ನೀಡುವುದು ತಪ್ಪಲ್ಲ. ಸೂಕ್ತ ಸಮಯದಲ್ಲಿ ನೀಡುವ ಉತ್ತಮ ಸಲಹೆಯೂ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲದು. ಆದರೆ ವ್ಯಕ್ತಿಯ ಅಗತ್ಯವನ್ನು ಅರ್ಥಮಾಡಿಕೊಳ್ಳದೆ ನೀಡುವ ಸಲಹೆ ಕೆಲವೊಮ್ಮೆ ಅವನ ಮನೋಬಲವನ್ನೇ ಕುಗ್ಗಿಸಬಹುದು. ಮನುಷ್ಯನಿಗೆ ಯಾವಾಗ ಮಾರ್ಗದರ್ಶನ ಬೇಕು, ಯಾವಾಗ ನೆರವು ಬೇಕು ಎಂಬುದನ್ನು ಅರಿಯುವುದೇ ನಿಜವಾದ ವಿವೇಕ.
– ಸಿದ್ಧಲಿಂಗ ಚೌಧರಿ.
ಶಿಕ್ಷಕರು
ಸಿಂದಗಿ – ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಜಗತ್ತಿನಲ್ಲಿ ಪುಕ್ಕಟೆಯಾಗಿ ಮತ್ತು ಹೇರಳವಾಗಿ ಸಿಗುವುದೆಂದರೆ ಸಲಹೆ ಮಾತ್ರ. ಆದರೆ ಅಗತ್ಯದ ಸಮಯದಲ್ಲಿ ನೆರವಿಗೆ ಬರುವ, ಸಂಕಷ್ಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಮನಸ್ಸುಗಳು ಸಿಗುವುದು ಅಪರೂಪ. ಸೋತವನಿಗೆ ಸೋಲಿನ ಕಾರಣಗಳನ್ನು ವಿವರಿಸುವವರಿಗಿಂತ, ಸೋಲಿನಿಂದ ಮೇಲೆತ್ತುವ ಕೈಗಳ ಅಗತ್ಯವಿರುತ್ತದೆ. ನೋವಿನಲ್ಲಿರುವವನಿಗೆ ಉಪದೇಶ ಮಾಡುವುದಕ್ಕಿಂತ ಅವನ ನೋವಿನಲ್ಲಿ ಭಾಗಿಯಾಗುವುದೇ ಶ್ರೇಷ್ಠ ಮಾನವೀಯ ಗುಣ.
‘‘ನನಗೆ ನಿನ್ನ ಸಲಹೆ ಬೇಡ, ಸಾಥ್ ಕೊಡು; ನಿನ್ನ ಸಲಹೆಯಿಂದ ನಾಲ್ಕು ಹೆಜ್ಜೆ ಇಡಬಹುದೇನೋ, ಆದರೆ ನಿನ್ನ ಸಾಥ್‌ನಿಂದ ಜಗತ್ತನ್ನೇ ಗೆಲ್ಲಬಲ್ಲೆ!’’ ಎಂಬ ಮಾತು ಬದುಕಿನ ಬಹುದೊಡ್ಡ ಸತ್ಯವನ್ನು ಅನಾವರಣಗೊಳಿಸುತ್ತದೆ.
ಇದಕ್ಕೊಂದು ಸುಂದರವಾದ ಪೌರಾಣಿಕ ದೃಷ್ಟಾಂತವಿದೆ. ಸಮುದ್ರದ ದಡದಲ್ಲಿದ್ದ ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಿಂದ ಸಮುದ್ರದ ನೀರನ್ನು ತೆಗೆದು ಪಕ್ಕದಲ್ಲಿದ್ದ ಸಣ್ಣ ಹೊಂಡಕ್ಕೆ ಹಾಕುತ್ತಿತ್ತು. ಇದನ್ನು ಗಮನಿಸಿದ ಮತ್ತೊಂದು ಹಕ್ಕಿ, ‘‘ಏನು ಮಾಡುತ್ತಿರುವೆ?’’ ಎಂದು ಕೇಳಿತು. ಅದಕ್ಕೆ ಆ ಹಕ್ಕಿ, ‘‘ಈ ಸಮುದ್ರ ನನ್ನ ಮೂರು ಮರಿಗಳನ್ನು ತನ್ನೊಳಗೆ ಸೆಳೆದುಕೊಂಡಿದೆ. ಹಾಗಾಗಿ ಈ ಸಮುದ್ರವನ್ನೇ ಖಾಲಿ ಮಾಡುತ್ತೇನೆ’’ ಎಂದಿತು.

ಆಶ್ಚರ್ಯಗೊಂಡ ಮತ್ತೊಂದು ಹಕ್ಕಿ, ‘‘ನಿನ್ನ ಗಾತ್ರವೆಷ್ಟು? ಸಮುದ್ರದ ವಿಸ್ತಾರವೆಷ್ಟು? ನಿನ್ನಿಂದ ಇದು ಸಾಧ್ಯವೇ?’’ ಎಂದು ಪ್ರಶ್ನಿಸಿತು. ಆಗ ಆ ಪುಟ್ಟ ಹಕ್ಕಿ ದೃಢವಾಗಿ, ‘‘ನನಗೆ ನಿನ್ನ ಸಲಹೆ ಬೇಡ, ಸಾಧ್ಯವಾದರೆ ಸಾಥ್ ಕೊಡು’’ ಎಂದಿತು. ಆ ಮಾತಿನಿಂದ ಪ್ರೇರಿತಗೊಂಡ ಹಕ್ಕಿಯೂ ಅದರೊಂದಿಗೆ ಕೈಜೋಡಿಸಿತು. ಮತ್ತೊಂದು ಹಕ್ಕಿ ಬಂತು, ಅದಕ್ಕೂ ಅದೇ ಉತ್ತರ ದೊರೆಯಿತು. ಹೀಗೆ ಸಾವಿರಾರು ಹಕ್ಕಿಗಳು ಒಂದಾಗಿ ಸಮುದ್ರವನ್ನು ಖಾಲಿ ಮಾಡುವ ಕಾರ್ಯಕ್ಕೆ ಮುಂದಾದವು.
ಈ ಸಂಗತಿಯನ್ನು ಗಮನಿಸಿದ ಭಗವಾನ್ ವಿಷ್ಣುವಿನ ವಾಹನವಾದ ಗರುಡನೂ ಹಕ್ಕಿಗಳ ನೆರವಿಗೆ ಧಾವಿಸಲು ಸಿದ್ಧನಾದನು. ಆಗ ವಿಷ್ಣು, ‘‘ಇಷ್ಟು ಹಕ್ಕಿಗಳಿಂದ ಸಮುದ್ರವನ್ನು ಖಾಲಿ ಮಾಡಲು ಸಾಧ್ಯವೇ?’’ ಎಂದು ಪ್ರಶ್ನಿಸಿದಾಗ ಗರುಡನು, ‘‘ಪ್ರಭುವೇ, ಸಲಹೆ ಬೇಡ, ಸಾಥ್ ಕೊಡಿ’’ ಎಂದು ವಿನಂತಿಸಿದನು. ಕೊನೆಗೆ ವಿಷ್ಣುವೇ ಹಕ್ಕಿಗಳ ನೆರವಿಗೆ ಧಾವಿಸಿದಾಗ, ಸಮುದ್ರವು ಭಯಗೊಂಡು ಆ ಹಕ್ಕಿಯ ಮರಿಗಳನ್ನು ಹಿಂದಿರುಗಿಸಿತು ಎಂಬುದು ಕಥೆಯ ಸಾರ.
ಇಲ್ಲಿ ಗೆದ್ದದ್ದು ಪುಟ್ಟ ಹಕ್ಕಿಯ ಶಕ್ತಿಯಲ್ಲ; ಅದರ ಸಂಕಲ್ಪಕ್ಕೆ ದೊರೆತ ಸಾಮೂಹಿಕ ಬೆಂಬಲ. ಅಸಾಧ್ಯವೆಂದು ಕಾಣುವ ಕಾರ್ಯವನ್ನೂ ಒಗ್ಗಟ್ಟು ಮತ್ತು ಸಹಕಾರದಿಂದ ಸಾಧ್ಯವಾಗಿಸಬಹುದು ಎಂಬುದಕ್ಕೆ ಇದೊಂದು ಅರ್ಥಪೂರ್ಣ ದೃಷ್ಟಾಂತ.

ಇಂದಿನ ಸಮಾಜದಲ್ಲಿ ಇತರರ ಸಮಸ್ಯೆಗಳನ್ನು ವಿಶ್ಲೇಷಿಸುವವರು ಸಾಕಷ್ಟಿದ್ದಾರೆ. ಆದರೆ ಸಮಸ್ಯೆಗಳ ಪರಿಹಾರಕ್ಕೆ ಕೈಜೋಡಿಸುವವರು ವಿರಳವಾಗಿದ್ದಾರೆ. ಬಡವನಿಗೆ ದುಡಿಯುವ ಸಲಹೆ ನೀಡುವ ಬದಲು ಉದ್ಯೋಗದ ಅವಕಾಶ ಕಲ್ಪಿಸಬೇಕು. ಸಂಕಷ್ಟದಲ್ಲಿರುವ ರೈತನಿಗೆ ಧೈರ್ಯ ಹೇಳುವುದರ ಜೊತೆಗೆ ನೆರವಿನ ಹಸ್ತ ಚಾಚಬೇಕು. ಸೋತ ವಿದ್ಯಾರ್ಥಿಗೆ ಟೀಕೆಯ ಬದಲು ಆತ್ಮವಿಶ್ವಾಸ ತುಂಬಬೇಕು. ಬದುಕಿನಲ್ಲಿ ಕುಗ್ಗಿದ ವ್ಯಕ್ತಿಗೆ ಉಪದೇಶಕ್ಕಿಂತ ಆತ್ಮೀಯವಾದ ಆಸರೆ ನೀಡಬೇಕು. ಆಗ ಮಾತ್ರ ನಮ್ಮ ಮಾತುಗಳಿಗೆ ಮಾನವೀಯತೆಯ ಮೌಲ್ಯ ದೊರೆಯುತ್ತದೆ.
ಸಲಹೆ ನೀಡುವುದು ತಪ್ಪಲ್ಲ. ಸೂಕ್ತ ಸಮಯದಲ್ಲಿ ನೀಡುವ ಉತ್ತಮ ಸಲಹೆಯೂ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲದು. ಆದರೆ ವ್ಯಕ್ತಿಯ ಅಗತ್ಯವನ್ನು ಅರ್ಥಮಾಡಿಕೊಳ್ಳದೆ ನೀಡುವ ಸಲಹೆ ಕೆಲವೊಮ್ಮೆ ಅವನ ಮನೋಬಲವನ್ನೇ ಕುಗ್ಗಿಸಬಹುದು. ಮನುಷ್ಯನಿಗೆ ಯಾವಾಗ ಮಾರ್ಗದರ್ಶನ ಬೇಕು, ಯಾವಾಗ ನೆರವು ಬೇಕು ಎಂಬುದನ್ನು ಅರಿಯುವುದೇ ನಿಜವಾದ ವಿವೇಕ.
ಕುಟುಂಬದಲ್ಲಾಗಲೀ, ಸ್ನೇಹ ಸಂಬಂಧಗಳಲ್ಲಾಗಲೀ, ಸಾಮಾಜಿಕ ಬದುಕಿನಲ್ಲಾಗಲೀ ಪರಸ್ಪರ ಸಹಕಾರವಿದ್ದಾಗ ಮಾತ್ರ ಸಂಬಂಧಗಳು ಗಟ್ಟಿಯಾಗುತ್ತವೆ. ಕಷ್ಟದ ದಿನಗಳಲ್ಲಿ ನಮ್ಮೊಂದಿಗೆ ನಿಂತವರನ್ನು ಮನುಷ್ಯ ಎಂದಿಗೂ ಮರೆಯುವುದಿಲ್ಲ. ಏಕೆಂದರೆ ಸಹಕಾರವೆಂಬುದು ಕೇವಲ ನೆರವಲ್ಲ; ಅದು ನಂಬಿಕೆಯ ಸಂಕೇತವೂ ಹೌದು. ಒಬ್ಬ ವ್ಯಕ್ತಿಯ ಸಂಕಲ್ಪಕ್ಕೆ ಮತ್ತೊಬ್ಬರ ಸಹಕಾರ ದೊರೆತಾಗ ಅದು ಸಾಮಾಜಿಕ ಪರಿವರ್ತನೆಯ ಶಕ್ತಿಯಾಗುತ್ತದೆ. ಇತಿಹಾಸದ ಅನೇಕ ಮಹತ್ತರ ಸಾಧನೆಗಳ ಹಿಂದೆ ಇಂತಹ ಸಾಮೂಹಿಕ ಬೆಂಬಲವೇ ಅಡಗಿದೆ.
ನಮ್ಮ ಸಣ್ಣ ಸಹಾಯವೂ ಇನ್ನೊಬ್ಬರ ಬದುಕಿನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಆದ್ದರಿಂದ ಇತರರ ಸಾಮರ್ಥ್ಯವನ್ನು ಪ್ರಶ್ನಿಸುವುದಕ್ಕಿಂತ ಅವರ ಪ್ರಯತ್ನಕ್ಕೆ ಶಕ್ತಿ ತುಂಬೋಣ. ಅಸಾಧ್ಯವೆಂದು ನಿರುತ್ಸಾಹಗೊಳಿಸುವ ಬದಲು ಸಾಧ್ಯತೆಯ ಬಾಗಿಲು ತೆರೆಯೋಣ. ಅವರ ಗೆಲುವಿನಲ್ಲಿ ನಮ್ಮ ಸಹಕಾರದ ಪುಟ್ಟ ಪಾಲಿರಲಿ.
ನೆನಪಿರಲಿ, ಸಲಹೆ ದಾರಿ ತೋರಿಸಬಹುದು; ಆದರೆ ಸಾಥ್ ಗುರಿ ತಲುಪಿಸುತ್ತದೆ. ಅಗತ್ಯದ ಸಮಯದಲ್ಲಿ ಸಲಹೆಗಾರರಾಗುವುದಕ್ಕಿಂತ ಸಹಯಾತ್ರಿಗಳಾಗೋಣ.


