ನಮ್ಮ ಮುಖ್ಯಮಂತ್ರಿಗಳು ಜಪಾನಿನಲ್ಲಿ ಕಸ ಸಂಸ್ಕರಣ ಘಟಕ ನೋಡಿ ಬಂದಿದ್ದಾರೆ. ಪೂಜ್ಯರು ಸ್ಥಾಪಿಸಿರುವ ನಿಡಸೋಶಿಯ ಪುಟ್ಟ ಕಸ ಸಂಸ್ಕರಣಾ ಘಟಕವನ್ನೂ ಒಮ್ಮೆ ನೋಡಿ ಬೆಂಗಳೂರನ್ನು ಹಾಗೂ ಕರುನಾಡನ್ನು ಕಸಮುಕ್ತ, ಸ್ವಚ್ಛ ಸುಂದರ ನಾಡನ್ನಾಗಿ ರೂಪಿಸಲು ಪೂಜ್ಯರ ಮಾರ್ಗದರ್ಶನ ಪಡೆಯುವಂತಾಗಲಿ
– ಸಂಗಮೇಶ ಬಬಲೇಶ್ವರ.
ನಿಕಟಪೂರ್ವ ಅಧ್ಯಕ್ಷರು
ಕರ್ನಾಟಕ ಬಾಲವಿಕಾಸ ಅಕಾಡೆಮಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ನಾವು ಆಶೀರ್ವಾದ,ಪೂಜೆ ಪ್ರವಚನ ಮಾಡುವ ಸ್ವಾಮೀಜಿಗಳನ್ನು ಮಠ, ಮಂದಿರ, ಮಸೀದಿಗಳಲ್ಲಿ, ಚರ್ಚುಗಳಲ್ಲಿ ಕಾಣುತ್ತೇವೆ. ಆದರೆ ಅಂದು ಸ್ವಚ್ಛ ಮಂಗಳೂರು ಅಭಿಯಾನದ ಮೂಲಕ, ದೇಶದ ಗಮನ ಸೆಳೆದಿದ್ದ, ಅಂದಿನ ಮಂಗಳೂರಿನ ರಾಮಕೃಷ್ಣ ಮಿಷನ್ ನ ಪೂಜ್ಯ ಶ್ರೀ ಏಕಘಮ್ಯಾನಂದಜಿ ಮಹಾರಾಜರು, ನಾಲ್ಕು ವರ್ಷದ ಹಿಂದೆ, ನಾಡಿನ ಪ್ರತಿಷ್ಠಿತ ಮಠಗಳಲ್ಲೊಂದಾದ, ಬೆಳಗಾವಿ ಜಿಲ್ಲೆಯ ನಿಡಸೋಶಿಯ ಸಂಸ್ಥಾನ ಮಠದ ನಿಯೋಜಿತ ಜಗದ್ಗುರುಗಳಾಗಿ ಇಂದು ಪೂಜ್ಯಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳು ಎಂದು ಕರೆಯಲ್ಪಡುತ್ತಿರುವ ಅವರು, ಶ್ರೀ ಮಠದಲ್ಲಿ ಹಸಿ ಕಸ, ವನ ಕಸದ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ, ಶ್ರೀ ಮಠದ 75 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ, ಅವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಹಸಿ ಕಸ, ವನ ಕಸವನ್ನು ಸಂಸ್ಕರಿಸಿ, ಹಸಿ ಕಸದಿಂದ ಉತ್ಪಾದನೆಯಾಗುತ್ತಿರುವ ಸ್ಲರಿ ಅನ್ನು, ವೈಜ್ಞಾನಿಕವಾಗಿ ಪ್ರಯೋಗಕ್ಕೋಳಪಡಿಸಿ, ವೈಜ್ಞಾನಿಕವಾದ ಹೊಸ ಹೊಸ ಪ್ರಯೋಗಗಳ ಮೂಲಕ ಇಂದು ಯಶಸ್ವಿಯಾಗಿರುವ ಪೂಜ್ಯರು, ಆ ಭಾಗದ ರೈತರಿಗೆ ಹಸಿ ಕಸದಿಂದ ತಯಾರಿಸಿದ ಸ್ಲರಿಯನ್ನು ನೀಡುವುದರ ಮೂಲಕ, ರೈತರು ತಾವು ಬೆಳೆಯುತ್ತಿರುವ ಬೆಳೆಗಳಲ್ಲಿ ಗಣನೀಯ ಪ್ರಮಾಣದ ಇಳುವರಿ ಹೆಚ್ಚಿಸಿಕೊಳ್ಳಲು ಕಾರಣರಾಗಿದ್ದಾರೆ. ನಾನು ನಿಡಸೋಶಿಯ ಅನಿಲ್ ಎಂಬ ರೈತನ ತೋಟಕ್ಕೆ ಭೇಟಿಕೊಟ್ಟಿದ್ದೆ. ಆತ ತನ್ನನ್ನು ಒಳಗೊಂಡಂತೆ ಇಲ್ಲಿ ಸಾವಿರಾರು ಜನ ರೈತರು ಹೇಗೆ ಸ್ಲರಿಯನ್ನು ಬೆಳೆಗಳಿಗೆ ಸಿಂಪಡಿಸಿ ಗುರುಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿರುವ ಕತೆಯನ್ನು ಹಾಗೂ ತಾನೇ ಸ್ವತಃ ಅದ್ಭುತವಾದ ಬೆಳೆಯನ್ನು ನಮಗೆ ತೋರಿಸಿ ತನ್ನ ಅನುಭವ ಹಂಚಿಕೊಂಡನು.

ಇನ್ನೊಂದು ಅತ್ಯಂತ ಆಶ್ಚರ್ಯದ ಸಂಗತಿ ಎಂದರೆ, ಗುರುಗಳು ತಯಾರಿಸಿದ ಸ್ಲರಿಗೆ ರೈತರು 15 ದಿನ ಮುಂಚಿತವಾಗಿ ಫ್ರೀ ಬುಕಿಂಗ್ ಮಾಡುತ್ತಾರೆ, ರೈತರೆಲ್ಲರ ಬೇಡಿಕೆಯನ್ನು ಈ ಪುಟ್ಟ ಘಟಕದಿಂದ ಪೂರೈಸಲು ಸಾಧ್ಯ ವಾಗುತ್ತಿಲ್ಲ.! ” ಕಾಯಕದಲ್ಲಿ ನಿರತನಾದೊಡೆ ಶಿವ ಪೂಜೆಯನ್ನೂ ಮರೆಯಬೇಕು..” ಎನ್ನುವ ಶರಣರ ಸದಾಶಯದಂತೆ ಆ ಭಾಗದ ಅನ್ನದಾತರ ಸೇವೆಯಲ್ಲಿ ಸಾರ್ಥಕ್ಯ ಕಾಣುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ.
ದೇಶ-ವಿದೇಶಗಳ ಗಣ್ಯರ ಭೇಟಿ
ಪೂಜ್ಯರು ಸ್ಥಾಪಿಸಿರುವ ಕಸ ಸಂಸ್ಕರಣಾ ಘಟಕಕ್ಕೆ ದೇಶ ವಿದೇಶದಿಂದ ಅನೇಕ ಗಣ್ಯರು ಭೇಟಿ ನೀಡಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ನಾಡಿನ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಬೆಳಗಾವಿ ಆವರಣದಲ್ಲಿ ಪೂಜ್ಯರು ಕಸವನ್ನ ರಸ ವಾಗಿಸುವ, ವಿನೂತನ ಯೋಜನೆಯನ್ನು ಪದ್ಮಶ್ರೀ ಡಾ. ಪ್ರಭಾಕರ ಕೋರೆಯವರ ವಿನಂತಿಯ ಮೇರೆಗೆ ನೂತನ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಉಪಯೋಗವಿಲ್ಲವೆಂದು ಬಿಸಾಕುವ ಕಸದಲ್ಲಿ, ರಸವನ್ನು,ಹತ್ತು ಹಲವು ಅವಕಾಶಗಳನ್ನು ಸೃಷ್ಟಿಸಿ ನೂರಾರು ಉದ್ಯೋಗಗಳನ್ನ ಸೃಷ್ಟಿಸಿರುವ, ಆ ಭಾಗದ ರೈತರ ಬಾಳಿಗೆ ಬೆಳಕಾಗುತ್ತಿರುವ, ಸ್ವಚ್ಛ ಸಂಕೇಶ್ವರ ಅಭಿಯಾನದ ಮೂಲಕ ನಾಡಿನ ಗಮನ ಸೆಳೆದಿರುವ, ಕಸದೊಳಗೆ ಹೊಸ ಕನಸುಗಳನ್ನು ಕಟ್ಟಿಕೊಡುತ್ತಿರುವ ಪೂಜ್ಯರ ಮಾರ್ಗದರ್ಶನದಿಂದ ನಮ್ಮ ಪರಿಸರ ಸ್ವಚ್ಛತೆಯಿಂದ ಕಂಗೊಳಿಸುವಂತಾಗಲಿ, ಮುಖ್ಯಮಂತ್ರಿಗಳು ಜಪಾನಿನಲ್ಲಿ ಕಸ ಸಂಸ್ಕರಣ ಘಟಕ ನೋಡಿ ಬಂದಿದ್ದಾರೆ, ಪೂಜ್ಯರು ಸ್ಥಾಪಿಸಿರುವ ನಿಡಸೋಶಿಯ ಪುಟ್ಟ ಕಸ ಸಂಸ್ಕರಣಾ ಘಟಕವನ್ನೂ, ಒಮ್ಮೆ ನೋಡಿ ಬೆಂಗಳೂರನ್ನು, ಹಾಗೂ ಕರುನಾಡನ್ನು ಕಸಮುಕ್ತ, ಸ್ವಚ್ಛ ಸುಂದರ ನಾಡನ್ನಾಗಿ ರೂಪಿಸಲು ಪೂಜ್ಯರ ಮಾರ್ಗದರ್ಶನ ಪಡೆಯುವಂತಾಗಲಿ ಎಂದು ಆಶಿಸುತ್ತೇನೆ. ಸದ್ದು ಗದ್ದಲವಿಲ್ಲದೆ, ಪರಿಸರವನ್ನು ಉಳಿಸುವ ಕೆಲಸದಲ್ಲಿ ನಿರತರಾಗಿರುವ,ಕಸದಲ್ಲಿ ರಸ ತೆಗೆಯುತ್ತಿರುವ ಸಂತನಿಗೆ ನನ್ನ ಶತ ಕೋಟಿ ಪ್ರಣಾಮಗಳು.


