ರೇವತಗಾಂವದಲ್ಲಿ ನಾಗದೇವತೆಗೆ ವಿಶೇಷ ಪೂಜೆ | ಸಂಭ್ರಮಾಚರಣೆ
ಚಡಚಣ: ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯ ಐದನೇ ದಿನದಂದು ಆಚರಿಸುವ ನಾಗರ ಪಂಚಮೀ ಹಬ್ಬವನ್ನು ರೇವತಗಾಂವ ಗ್ರಾಮದಲ್ಲಿ ಶುಕ್ರವಾರದಂದು ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ನಾಗ ದೇವತೆ ಹುತ್ತಕ್ಕೆ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸಿದರಲ್ಲದೆ, ನಾಗದೇವತೆಗೆ ಆರತಿ ಬೆಳಗಿ, ಹಾಲೆರೆದು, ಐದೆಳೆ ದಾರದ ನೂಲ ಸುತ್ತಿ, ಆ ದಾರವನ್ನು ತಮ್ಮ ಕೊರಳಲ್ಲಿಯೂ ಧರಿಸಿದರು.
ಇನ್ನೂ ಕೆಲವರು ತಮ್ಮ ಮನೆಯ ಜಗುಲಿ ಮೇಲೆ ನಾಗ ದೇವತೆ ಪ್ರತಿಷ್ಠಾಪಿಸಿ ಹಾಲೆರೆದು ಪೂಜೆ ಸಲ್ಲಸಿ ನೈವೇದ್ಯ ಅರ್ಪಿಸಿದರು. ನಂತರ ಮಹಿಳೆಯರು, ಕಿರಿಯರು ಹಾಗೂ ವಯೋವೃದ್ಧರೂ ಜೋಕಾಲಿ ಹಾಗೂ ಪೂಗಾಡಿ ಆಟವಾಡಿ ಸಂಭ್ರಮಿಸಿದರು. ಶ್ರೀ ಮಲಕಾರಿಸಿದ್ದನ ದೇವಾಸ್ಥಾನದಲ್ಲಿ ಗ್ರಾಮದ ಕಲಾ ತಂಡಗಳಿಂದ ಡೊಳ್ಳಿನ ಪದಗಳು ನಡೆದವು.
ಗ್ರಾಮದ ಯುವಕರು ನಿಂಬೆ ಹಣ್ಣು ಎಸೆಯುವ, ಕಣ್ಮುಚ್ಚು, ಕಬಡಿ, ಚಕ್ರಗಾಣ ಹಾಗೂ ಸೂರ್‌ಮನೆ ಆಟಗಳನ್ನು ಆಡಿ ಸಂಭ್ರಮಿಸಿದರು.
ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿಯವರು ಮಾತನಾಡುತ್ತ. ಜನಪದ ಕಥೆಯ ಪ್ರಕಾರ ನಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮದ್ಯ ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ, ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ ಎಂದು ಹೇಳಿದರು.

