ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ೨೦೨೪-೨೫ನೆಯ ಸಾಲಿನ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆ, ಶಾಲಾ ಸಂಘಗಳ ಉದ್ಘಾಟನೆ
ಸಿಂದಗಿ: ಪ್ರತಿ ಮಗುವನ್ನು ಕಲಿಕೆಯಲ್ಲಿ ತೊಡಗಿಸುವುದು. ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ನಿರಂತರ ಅಧ್ಯಯನ ಮಾಡಿ ಮಗುವನ್ನು ಧನಾತ್ಮಕವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಎಚ್.ಜಿ.ಪ್ರೌಢಶಾಲೆಯ ಮುಖ್ಯಗುರು ಎಸ್.ಬಿ.ಕುಲಕರ್ಣಿ ಹೇಳಿದರು.
ಶನಿವಾರದಂದು ಪಟ್ಟಣದ ಹೊರವಲಯದ ರಾಂಪುರ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರಾಢಶಾಲೆಯಲ್ಲಿ ೨೦೨೪-೨೫ನೆಯ ಸಾಲಿನ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆ, ಶಾಲಾ ಸಂಘಗಳ ಉದ್ಘಾಟನೆ ಹಾಗೂ ಶಾಲಾ ಸಂಸತ್ತು ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಮುಂದುವರಿಸಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯ ಚಟುವಟಿಕೆಗಳೊಂದಿಗೆ ಇನ್ನಿತರ ಪಠ್ಯಪೂರಕ ಚಟುವಟಿಕೆಗಳೂ ಅಗತ್ಯ. ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ, ಆಡಳಿತ ಮಂಡಳಿ ಹಾಗೂ ಮುಖ್ಯಗುರುಗಳು, ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹೀಗಾಗಿಯೇ ಪ್ರತಿವರ್ಷ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಈ ಶಾಲೆಯ ಪರಿಶ್ರಮವೇ ಕಾರಣ ಎಂದರು.
ಈ ವೇಳೆ ಸರಕಾರಿ ಆದರ್ಶ ವಿದ್ಯಾಲಯ ಮುಖ್ಯಗುರು ಎಸ್.ಕೆ.ಬಿರಾದಾರ, ಹಿರಿಯ ಪತ್ರಕರ್ತ ಶಾಂತೂ ಹಿರೇಮಠ ಮಾತನಾಡಿ, ಜ್ಞಾನಕ್ಕೆ ಸಮಾನವಾದದ್ದು ಯಾವುದು ಇಲ್ಲ. ಪ್ರೇರಣಾ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಹೋದರರ ತ್ಯಾಗ ದೊಡ್ಡದು. ಇಂತಹ ಸುಂದರ ಪರಿಸರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸಂತಸ. ಜಾಗತಿಕರಣ ಮಟ್ಟದಲ್ಲಿ ಖಾಸಗಿ ಶಾಲೆಗಳು ವ್ಯವಹಾರದ ಕೇಂದ್ರಗಳಾಗಿವೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಮಾನವೀಯ ಮೌಲ್ಯಗಳನ್ನು ಕೊಡ ಮಾಡುವಲ್ಲಿ ಈ ಸಂಸ್ಥೆ ಅಧ್ಭುತ ಸಾಧನೆ ಮಾಡಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.
ಈ ವೇಳೆ ವಿಜಯಪುರದ ಜ್ಞಾನಾಶ್ರಮದ ಪರಮ ಪೂಜ್ಯ ಶ್ರೀಶ್ರೀಶ್ರೀ ಲಿಂ.ಸಿದ್ಧೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ನಮನ ಸಲ್ಲಿಸಿದರು. ಅತಿಥಿಗಳು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ಲಗತ್ತಿಸಿ ಪ್ರತಿನಿಧಿಗಳಿಂದ ಸಚಿವ ಸಂಪುಟದ ಜವಾಬ್ದಾರಿ ವಹಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪಿ.ಡಿ.ಕುಲಕರ್ಣಿ, ಮುಖ್ಯಗುರು ಎಸ್.ಐ.ಅಸ್ಕಿ, ದೈಹಿಕ ಶಿಕ್ಷಕ ಶ್ರೀಕಾಂತ ಗೋಗಿ, ಸತೀಶ್ ಕುಲಕರ್ಣಿ, ವಿದ್ಯಾಶ್ರೀ ಅಂಬಲಗಿ, ನಂದಕುಮಾರ್ ಹೊಳ್ಳ ಸೇರಿದಂತೆ ಆಡಳಿತ ಮಂಡಳಿ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

